

ಬಳ್ಳಾರಿ, 19 ಜನವರಿ (ಹಿ.ಸ.) :
ಆ್ಯಂಕರ್ : ಕರ್ನಾಟಕ ಸರ್ಕಾರದ ಮಹಿಳಾ ನೌಕರರಿಗೆ ಒಂದು ವರ್ಷಕಾಲ ಮಾತೃತ್ವ ರಜೆಯನ್ನು ನೀಡಬೇಕು, ನೌಕರರಿಗೆ 8ನೇ ವೇತನ ಆಯೋಗವನ್ನು ರಚಿಸಬೇಕು, ಎನ್‍ಪಿಎಸ್ ರದ್ದು ಮಾಡಿ ಓಪಿಎಸ್ ಜಾರಿ ಮಾಡಬೇಕು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘವು ಸದಸ್ಯತ್ವ ಅಭಿಯಾನವನ್ನು ನಡೆಸಿದೆ.
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೋಷನಿ ಗೌಡ ಅವರು ಸುದ್ದಿಗಾರರಿಗೆ ಸೋಮವಾರ ಈ ಮಾಹಿತಿ ನೀಡಿದ್ದು, ಭಾರತ ಸಂವಿಧಾನದ ಪರಿಚ್ಛೇದ 15 ರ ಅಡಿಯಲ್ಲಿ ಮಹಿಳೆಯರಿಗೆ ವಿಶೇಷ ಸೌಲಭ್ಯ ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ.
ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಗಳು ಮಹಿಳಾ ಉದ್ಯೋಗಿಗಳ ಸಬಲೀಕರಣಕ್ಕಾಗಿ ರೂಪಿಸಿರುವ ನೀತಿ-ನಿಯಮಗಳನ್ನು ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ಬದಲಾವಣೆ ಮಾಡಿ, ಜಾರಿ ಮಾಡಬೇಕು.
ಈ ನಿಟ್ಟಿನಲ್ಲಿ ಮಾತೃತ್ವ ರಜೆಯನ್ನು ಒಂದು ವರ್ಷಕ್ಕೆ ವಿಸ್ತರಿಸಬೇಕು. ಗರ್ಭಿಣಿ ನೌಕರರ ವೈದ್ಯಕೀಯ ಪರೀಕ್ಷೆಗಾಗಿ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ವೈಯಕೀಯ ರಜೆ ನೀಡಬೇಕು. ಪ್ರತಿ ವರ್ಷ ಸೆಪ್ಟಂಬರ್ 13ರನ್ನು ಮಹಿಳಾ ಸರ್ಕಾರಿ ನೌಕರರ ದಿನವನ್ನಾಗಿ ಆಚರಿಸಬೇಕು. ಹಬ್ಬದ ಮುಂಗಡವಾಗಿ 50 ಸಾವಿರ ಪಾವತಿಸಬೇಕು. ವಿದೇಶೀ ಪ್ರವಾಸಕ್ಕೆ ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಸ್ವಯಂ ಚಾಲಿತ ಪರವಾನಿಗೆ ಸಿಗಬೇಕು ಎಂದು ಅವರು ಹೇಳಿದರು.
ರಾಜ್ಯದಲ್ಲಿ 2.5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸರ್ಕಾರಿ ನೌಕರರಿದ್ದಾರೆ. ಮಹಿಳೆಯರಿಗೆ ನಾಯಕತ್ವ ತರಬೇತಿ, ವ್ಯಕ್ತಿತ್ವ ವಿಕಸನ,
ಸಮಸ್ಯೆಗಳ ಪರಿಹಾರಕ್ಕೆ ಹೊಸ ದೃಷ್ಟಿಕೋನ, ಕಾನೂನು ನೆರವು, ಮಹಿಳಾ ಕುಂದುಕೊರತೆಗಳ ನಿವಾರಣೆ, ಸೇವಾ ನಿಯಮಗಳು ಮತ್ತು ಸೌಲಭ್ಯಗಳ ಅರಿವು, ಮಹಿಳಾ ಸಹಕಾರ ಸಂಘಗಳ ರಚನೆ, ಗೃಹ ನಿರ್ಮಾಣ ಸಂಘಗಳ ಸ್ಥಾಪನೆ, ಸಾಂಸ್ಕøತಿಕ-ಕ್ರೀಡಾ ಚಟುವಟಿಕೆಗಳನ್ನು ಏರ್ಪಡಿಸುವಿಕೆ,
ಆರೋಗ್ಯ, ಮಕ್ಕಳ ಶಿಕ್ಷಣ ಮತ್ತು ಪ್ರತಿಭಾ ಪುರಸ್ಕಾರ, ಗ್ರಂಥಾಲಯಗಳ ನಿರ್ಮಾಣ, ಶಿಶುಪಾಲನಾ ಕೇಂದ್ರಗಳ ಸ್ಥಾಪನೆ ಸೇರಿ ಹಲವಾರು ಯೋಜನೆಗಳನ್ನು ತಮ್ಮ ಸಂಘವು ಹಮ್ಮಿಕೊಂಡಿದೆ.
ಕರ್ನಾಟದಲ್ಲಿ ಮೊದಲ ಬಾರಿಗೆ ಮಹಿಳಾ ಸರ್ಕಾರಿ ನೌಕರರ ಸಂಘ ಸ್ಥಾಪನೆಯಾಗಿದ್ದು, ಕಬ್ಬನ್ ಉದ್ಯಾನವನದ ಬಾಲಭವನ ಆವರಣದಲ್ಲಿ ಕೇಂದ್ರ ಕಚೇರಿ ಇದೆ. ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಘಟಕಗಳನ್ನು ಪ್ರಾರಂಭಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸದಸ್ಯತ್ವಕ್ಕಾಗಿ ಆಸಕ್ತರು ರೋಷನಿಗೌಡ, ರಾಜ್ಯಾಧ್ಯಕ್ಷರು ಮೊಬೈಲ್ : 7892630746, ಡಾ. ವಿಣಾ ಕೃಷ್ಣಮೂರ್ತಿ, ಕೋಶ್ಯಾಧ್ಯಕ್ಷರು ಮೊಬೈಲ್ ಸಂಖ್ಯೆ : 98453 90448ಗೆ ಸಂಪರ್ಕ ಮಾಡಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್