
ಬೆಂಗಳೂರು, 18 ಜನವರಿ (ಹಿ.ಸ.) :
ಆ್ಯಂಕರ್ : ಶಿಡ್ಲಘಟ್ಟದ ಪೌರಾಯುಕ್ತೆಯ ಮೇಲೆ ನಿಂದನೆ ಹಾಗೂ ಬೆದರಿಕೆ ಪ್ರಕರಣದ ಬೆನ್ನಲ್ಲೇ, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರವಾದ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ಗಂಭೀರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವರುಣಾ ಹೋಬಳಿಯ ಗುಡಮಾದನಹಳ್ಳಿ ಗ್ರಾಮದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿಯೊಬ್ಬರ ಮೇಲೆ ನಿಂದನೆ ನಡೆಸಿ, ಜೀವ ಬೆದರಿಕೆ ಹಾಕಿರುವ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.
ವರುಣಾ ಪ್ರದೇಶದಲ್ಲಿ ನಿಮ್ಹಾನ್ಸ್ ಮಾದರಿಯ ಆಸ್ಪತ್ರೆ ನಿರ್ಮಾಣಕ್ಕೆ ಗುರುತಿಸಲಾದ ಜಮೀನಿನ ಪರಿಶೀಲನೆಗಾಗಿ ತೆರಳಿದ್ದ ಭವ್ಯ ಎಂಬ ಮಹಿಳಾ ಅಧಿಕಾರಿ ವಿರುದ್ಧ ಸ್ಥಳೀಯ ಪುಡಾರಿಯೊಬ್ಬ ತೀವ್ರ ವಾಗ್ವಾದ ನಡೆಸಿ, ಕೊಲೆ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ.
ಸಾರ್ವಜನಿಕ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿಯ ಮೇಲೆ ಈ ರೀತಿಯ ವರ್ತನೆ ನಡೆಸಿರುವುದು ಗಂಭೀರ ಮತ್ತು ಆತಂಕಕಾರಿ ಬೆಳವಣಿಗೆಯಾಗಿದೆ.
ಈ ಘಟನೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ, “ರಾಜ್ಯದಲ್ಲಿ ಈಗಾಗಲೇ ಕುಸಿದಿರುವ ಅಧಿಕಾರಿಗಳ ಮನೋಬಲವನ್ನು ಇಂತಹ ಘಟನೆಗಳು ಮತ್ತಷ್ಟು ಕುಗ್ಗಿಸುವ ಅಪಾಯ ಎದುರಾಗಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಶಿಡ್ಲಘಟ್ಟದ ಪೌರಾಯುಕ್ತೆಯ ಪ್ರಕರಣದ ಬಳಿಕವೂ ಮಹಿಳಾ ಅಧಿಕಾರಿಗಳಿಗೆ ರಕ್ಷಣೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ‘ಜಂಗಲ್ ರಾಜ್’ ತಲೆ ಎತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಉಳಿಗಾಲವಿಲ್ಲದಂತಹ ವಾತಾವರಣ ನಿರ್ಮಾಣವಾಗಿದೆ” ಎಂದು ಆರೋಪಿಸಿದರು.
ಮುಖ್ಯಮಂತ್ರಿ ಅವರ ಸ್ವಕ್ಷೇತ್ರದಲ್ಲೇ ಮಹಿಳಾ ಅಧಿಕಾರಿಗೆ ಜೀವ ಬೆದರಿಕೆ ಒಡ್ಡಲಾಗಿರುವುದು ಆಡಳಿತ ವ್ಯವಸ್ಥೆಯ ದೌರ್ಬಲ್ಯವನ್ನು ತೋರಿಸುತ್ತದೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa