ಚಿಕ್ಕಜಂತಕಲ್‌ನಲ್ಲಿ ಶೌಚಾಲಯ ಇಲ್ಲದ ದುಸ್ಥಿತಿ ; ಕಾಂಗ್ರೆಸ್ ಬೂಟಾಟಿಕೆಗೆ ಜೀವಂತ ಸಾಕ್ಷಿ : ಆರ್. ಅಶೋಕ್
ಪ್ರತಿ
ಚಿಕ್ಕಜಂತಕಲ್‌ನಲ್ಲಿ ಶೌಚಾಲಯ ಇಲ್ಲದ ದುಸ್ಥಿತಿ ; ಕಾಂಗ್ರೆಸ್ ಬೂಟಾಟಿಕೆಗೆ ಜೀವಂತ ಸಾಕ್ಷಿ : ಆರ್. ಅಶೋಕ್


ಬೆಂಗಳೂರು, 18 ಜನವರಿ (ಹಿ.ಸ.) :

ಆ್ಯಂಕರ್ : ಅಂಬೇಡ್ಕರ್, ಗಾಂಧಿ ಹಾಗೂ ದಲಿತರ ಹೆಸರಿನಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಇದಕ್ಕಿಂತ ದೊಡ್ಡ ನಾಚಿಕೆಗೇಡಿನ ಘಟನೆ ಮತ್ತೊಂದು ಇರಲಿಕ್ಕಿಲ್ಲ ಎಂದು ವಿಧಾನ ಸಭೆಯ ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಚಿಕ್ಕಜಂತಕಲ್ ಗ್ರಾಮದ ಅಂಬೇಡ್ಕರ್ ಏರಿಯಾದಲ್ಲಿ ಮಹಿಳೆಯರು ಸಮುದಾಯ ಶೌಚಾಲಯದ ಕೊರತೆಯಿಂದ ಬಯಲನ್ನೇ ಶೌಚಾಲಯ ಮಾಡಿಕೊಂಡು, ಗೌಪ್ಯತೆಗೆ ಸೀರೆಯನ್ನೇ ಬಾಗಿಲಾಗಿ ಬಳಸಿಕೊಳ್ಳುತ್ತಿರುವ ಮನಕಲಕುವ ಘಟನೆ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಈ ಘಟನೆ ಕಾಂಗ್ರೆಸ್ ಪಕ್ಷದ ಆಷಾಢಭೂತಿತನ ಹಾಗೂ ಬೂಟಾಟಿಕೆಗೆ ಜೀವಂತ ಸಾಕ್ಷಿಯಾಗಿದೆ. ದಶಕಗಳ ಕಾಲ ಕಲ್ಯಾಣ ಕರ್ನಾಟಕದ ಜನರ ಮೇಲೆ ಸವಾರಿ ಮಾಡಿ ಅಧಿಕಾರ ಅನುಭವಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುಟುಂಬದ ‘ಸಾಧನೆಗೆ’ ಈ ಘಟನೆ ಕನ್ನಡಿ ಹಿಡಿದಂತಿದೆ ಎಂದು ಅಶೋಕ್ ಆರೋಪಿಸಿದ್ದಾರೆ.

‘ಅಹಿಂದ’ ಹೆಸರಿನಲ್ಲಿ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಾತೆತ್ತಿದರೆ ಬುದ್ಧ–ಬಸವ–ಅಂಬೇಡ್ಕರ್ ಹೆಸರು ಹೇಳುವ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು, ಹಾಗೂ “ನಾನು ಈ ಭಾಗದಲ್ಲೇ ಹುಟ್ಟಬೇಕಿತ್ತು” ಎಂದು ಹೇಳಿಕೆ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು—ಚಿಕ್ಕಜಂತಕಲ್ ಗ್ರಾಮದ ಮಹಿಳೆಯರ ಈ ಶೋಚನೀಯ ಪರಿಸ್ಥಿತಿಗೆ ಉತ್ತರಿಸಬೇಕಾಗಿದೆ ಎಂದು ಅಶೋಕ್ ಆಗ್ರಹಿಸಿದರು.

ದಲಿತರ ಅಭಿವೃದ್ಧಿ, ಸಾಮಾಜಿಕ ನ್ಯಾಯ ಎಂದು ಭಾಷಣ ಮಾಡುವ ಕಾಂಗ್ರೆಸ್ ಸರ್ಕಾರದ ನಿಜವಾದ ಮುಖ ಈ ಘಟನೆಯಿಂದ ಬಯಲಾಗಿದ್ದು, ಕೂಡಲೇ ಗ್ರಾಮದಲ್ಲಿ ಸಮುದಾಯ ಶೌಚಾಲಯ ನಿರ್ಮಿಸಿ ಮಹಿಳೆಯರ ಗೌರವ ರಕ್ಷಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande