ನೋಟಾ ಬೇಡ ; ಲಭ್ಯವಿರುವ ಅಭ್ಯರ್ಥಿಗಳಲ್ಲೇ ಉತ್ತಮರನ್ನು ಆಯ್ಕೆ ಮಾಡಿ-ಡಾ. ಮೋಹನ್ ಭಾಗವತ್
ನಾಗ್ಪುರ, 15 ಜನವರಿ (ಹಿ.ಸ.) : ಆ್ಯಂಕರ್ : ಮತದಾನದ ವೇಳೆ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸುವ ನೋಟಾ ಆಯ್ಕೆಯ ಬದಲು, ಲಭ್ಯವಿರುವ ಅಭ್ಯರ್ಥಿಗಳಲ್ಲೇ ಅರ್ಹ ಮತ್ತು ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವುದು ಹೆಚ್ಚು ಸೂಕ್ತವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ್ ಡ
Bhagwat


ನಾಗ್ಪುರ, 15 ಜನವರಿ (ಹಿ.ಸ.) :

ಆ್ಯಂಕರ್ : ಮತದಾನದ ವೇಳೆ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸುವ ನೋಟಾ ಆಯ್ಕೆಯ ಬದಲು, ಲಭ್ಯವಿರುವ ಅಭ್ಯರ್ಥಿಗಳಲ್ಲೇ ಅರ್ಹ ಮತ್ತು ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವುದು ಹೆಚ್ಚು ಸೂಕ್ತವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಅಭಿಪ್ರಾಯಪಟ್ಟರು.

ಮಹಾರಾಷ್ಟ್ರದಲ್ಲಿ ಗುರುವಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಡಾ. ಮೋಹನ್ ಭಾಗವತ್ ಹಾಗೂ ಮಾಜಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ‘ಭೈಯಾಜಿ’ ಜೋಶಿ ಅವರು ನಾಗ್ಪುರದ ಮಹಲ್ ಪ್ರದೇಶದಲ್ಲಿರುವ ನೈಟ್ ಹೈಸ್ಕೂಲ್ ಮತದಾನ ಕೇಂದ್ರದಲ್ಲಿ ತಮ್ಮ ಮತ ಚಲಾಯಿಸಿದರು. ಮತದಾನಕ್ಕೆ ಆಗಮಿಸಿದವರಲ್ಲಿ ಅವರು ಮೊದಲಿಗರಾಗಿದ್ದರು.

ಮತ ಚಲಾಯಿಸಿದ ಬಳಿಕ ಮಾತನಾಡಿದ ಡಾ. ಭಾಗವತ್, ನೋಟಾ ಆಯ್ಕೆಯು ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸಿದಂತಾಗಿದ್ದು, ಇದು ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣವಲ್ಲ ಎಂದು ಹೇಳಿದರು. ನೋಟಾ ಬಳಸುವುದರಿಂದ ಅನರ್ಹ ಅಭ್ಯರ್ಥಿಗಳಿಗೆ ಪರೋಕ್ಷವಾಗಿ ಲಾಭವಾಗುವ ಸಾಧ್ಯತೆ ಇದೆ. ಆದ್ದರಿಂದ ಲಭ್ಯವಿರುವ ಅಭ್ಯರ್ಥಿಗಳ ಪೈಕಿ ಅತ್ಯಂತ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುವುದು ಮತದಾರರ ಜವಾಬ್ದಾರಿಯಾಗಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ನಿರ್ಣಾಯಕವಾಗಿದ್ದು, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯುತವಾಗಿ ಮತ ಚಲಾಯಿಸಬೇಕು ಎಂದು ಅವರು ಹೇಳಿದರು. ಅರಾಜಕತೆ ಎಂದರೆ ನಾಯಕತ್ವದ ಅಭಾವ, ಅದು ಸಮಾಜಕ್ಕೆ ಹಾನಿಕಾರಕವಾಗುತ್ತದೆ ಎಂದೂ ಅಭಿಪ್ರಾಯಪಟ್ಟರು.

ಮಹಾಭಾರತವನ್ನು ಉಲ್ಲೇಖಿಸಿದ ಡಾ. ಭಾಗವತ್, ಸರಿಯಾದ ನಾಯಕತ್ವದ ಆಯ್ಕೆ ಸಮಾಜದ ಸ್ಥಿರತೆಗೆ ಅತ್ಯಂತ ಅಗತ್ಯ ಎಂಬ ಸಂದೇಶವನ್ನು ಅದು ನೀಡುತ್ತದೆ ಎಂದು ಹೇಳಿದರು. ಮತದಾನದ ಕುರಿತು ಚುನಾವಣಾ ಆಯೋಗ ನಡೆಸುತ್ತಿರುವ ಸಾರ್ವಜನಿಕ ಜಾಗೃತಿ ಅಭಿಯಾನಗಳ ಪರಿಣಾಮ ಕ್ರಮೇಣ ಗೋಚರಿಸುತ್ತಿದೆ ಎಂದರು. ನೋಟಾ ಬಳಸುವ ಬದಲು ಲಭ್ಯವಿರುವ ಆಯ್ಕೆಗಳಲ್ಲಿ ಉತ್ತಮ ಅಭ್ಯರ್ಥಿಯನ್ನು ಆರಿಸಬೇಕೆಂದು ಅವರು ಪುನರುಚ್ಚರಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande