
ನವದೆಹಲಿ, 13 ಜನವರಿ (ಹಿ.ಸ.);
ಆ್ಯಂಕರ್:
ಗಣರಾಜ್ಯೋತ್ಸವ–2026 ಆಚರಣೆ ಹಿನ್ನೆಲೆಯಲ್ಲಿ ಜನವರಿ 26ರಂದು ತಿಲಕ್ ಸೇತುವೆ ಮೇಲೆ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಉತ್ತರ ರೈಲ್ವೆ ತಿಳಿಸಿದೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ಗಂಟೆಯವರೆಗೆ ಸೇತುವೆಯ ಮೂಲಕ ಹಾದುಹೋಗುವ ಎಲ್ಲಾ ರೈಲುಗಳ ಸಂಚಾರವನ್ನು ನಿಲ್ಲಿಸಲಾಗುವುದರಿಂದ ಹಲವಾರು ರೈಲುಗಳು ರದ್ದಾಗಲಿದ್ದು, ಕೆಲವು ರೈಲುಗಳ ಮಾರ್ಗ ಬದಲಾವಣೆ ಹಾಗೂ ನಿಯಂತ್ರಣ ನಡೆಯಲಿದೆ.
ಈ ಅವಧಿಯಲ್ಲಿ ನವದೆಹಲಿ–ಘಾಜಿಯಾಬಾದ್, ಪಲ್ವಾಲ್–ನವದೆಹಲಿ ಹಾಗೂ ಸಾಹಿಬಾಬಾದ್–ದೆಹಲಿ ಜಂಕ್ಷನ್ ವಿಭಾಗಗಳಲ್ಲಿನ ಹಲವು ಇಎಂಯು ಹಾಗೂ ಸ್ಥಳೀಯ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುತ್ತದೆ ಎಂದು ಉತ್ತರ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವೇಳೆ ದಿಬ್ರುಗಢ–ನವದೆಹಲಿ, ಸೀಲ್ಡಾ–ನವದೆಹಲಿ, ರಾಂಚಿ–ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್, ಸೀಲ್ಡಾ–ಬಿಕಾನೇರ್ ಡುರೊಂಟೊ ಎಕ್ಸ್‌ಪ್ರೆಸ್ ಹಾಗೂ ಡೆಹ್ರಾಡೂನ್–ನವದೆಹಲಿ ಜನ ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳನ್ನು ಅಗತ್ಯವಿದ್ದಲ್ಲಿ ಸಾಹಿಬಾಬಾದ್–ದೆಹಲಿ ಶಹದಾರ–ದೆಹಲಿ ಜಂಕ್ಷನ್ ಮಾರ್ಗದ ಮೂಲಕ ತಿರುಗಿಸಲಾಗುವುದು.
ಅಲ್ಲದೆ ಹರಿಯಾಣ ಎಕ್ಸ್‌ಪ್ರೆಸ್, ಅಮೃತಸರ–ನಾಗ್ಪುರ ಎಸಿ ಎಕ್ಸ್‌ಪ್ರೆಸ್, ಜಮ್ಮು ತಾವಿ–ಪುಣೆ ಝೀಲಂ ಎಕ್ಸ್‌ಪ್ರೆಸ್, ಪಶ್ಚಿಮ ಎಕ್ಸ್‌ಪ್ರೆಸ್, ನವದೆಹಲಿ–ವಾರಣಾಸಿ ಕಾಶಿ ವಿಶ್ವನಾಥ ಎಕ್ಸ್‌ಪ್ರೆಸ್, ಮಗಧ ಎಕ್ಸ್‌ಪ್ರೆಸ್ ಹಾಗೂ ಕಾನ್ಪುರ ಸೆಂಟ್ರಲ್–ನವದೆಹಲಿ ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳನ್ನು ಮೆರವಣಿಗೆ ಪೂರ್ಣಗೊಳ್ಳುವವರೆಗೆ ನವದೆಹಲಿ, ಹಜರತ್ ನಿಜಾಮುದ್ದೀನ್ ಅಥವಾ ಸಾಹಿಬಾಬಾದ್ ನಿಲ್ದಾಣಗಳಲ್ಲಿ ತಡೆಹಿಡಿಯುವ ಸಾಧ್ಯತೆ ಇದೆ.
ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಮುನ್ನ NTES ಆ್ಯಪ್ ಅಥವಾ ರೈಲ್ವೆ ಸಹಾಯವಾಣಿ 139 ಮೂಲಕ ನವೀಕರಿಸಿದ ರೈಲು ಸ್ಥಿತಿ ಮಾಹಿತಿ ಪಡೆಯುವಂತೆ ಉತ್ತರ ರೈಲ್ವೆ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa