
ಗದಗ, 10 ಜನವರಿ (ಹಿ.ಸ.) :
ಆ್ಯಂಕರ್ : ಗದಗ ನಗರದ ಹೊಂಬಳ ರಸ್ತೆಯ ಸರ್ವಜ್ಞ ಸರ್ಕಲ್ ಸಮೀಪ ಕಡಲೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರು ಕಳ್ಳನನ್ನು ಹಿಡಿದು ಧರ್ಮದೇಟು ನೀಡಿದ ಘಟನೆ ನಡೆದಿದೆ.
ಹಲವು ದಿನಗಳಿಂದ ರೈತರ ಜಮೀನುಗಳಲ್ಲಿ ಕಡಲೆ ಕಳ್ಳತನ ನಡೆಯುತ್ತಿದ್ದು, ಇದರಿಂದ ಕಂಗಾಲಾಗಿದ್ದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಿನ ಜಾವ ಜಮೀನಿನಲ್ಲಿ ಕಡಲೆ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ವಾಯುವಿಹಾರಕ್ಕೆ ಬಂದ ಸಾರ್ವಜನಿಕರ ಕಣ್ಣಿಗೆ ಕಳ್ಳ ಬಿದ್ದಿದ್ದಾನೆ.
ಕೂಡಲೇ ಈ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗಿದ್ದು, ಮಾಹಿತಿ ಪಡೆದ ರೈತರು ಸ್ಥಳಕ್ಕೆ ಧಾವಿಸಿ ಕಳ್ಳನನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ನಂತರ ಕಳ್ಳನನ್ನು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ ನೀಡಿದ ರೈತರು, ತಲೆ ಹಾಗೂ ಕೊರಳಿಗೆ ಕಡಲೆ ಗಿಡಗಳ ಮಾಲೆ ಹಾಕಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ರೈತರ ಹೇಳಿಕೆ ಪ್ರಕಾರ, ಕಳೆದ ಕೆಲವು ದಿನಗಳಿಂದ ಕಡಲೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಪ್ರತಿದಿನ ಬೆಳಗಿನ ಜಾವ ಕಡಲೆ ಕಳ್ಳತನ ಮಾಡಿ ತಪ್ಪಿಸಿಕೊಳ್ಳಲಾಗುತ್ತಿತ್ತು. ಇದರಿಂದಾಗಿ ಬೆಳೆದ ಬೆಳೆ ಕಳೆದುಕೊಂಡ ರೈತರು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದರು. ಇದೇ ಕಾರಣದಿಂದ ಇಂದು ಕಳ್ಳ ಸಿಕ್ಕಿಬಿದ್ದಾಗ ರೈತರ ಆಕ್ರೋಶ ಮಿತಿ ಮೀರಿದೆ ಎಂದು ತಿಳಿಸಿದರು.
ಘಟನೆಯ ಮಾಹಿತಿ ಪಡೆದ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಕಳ್ಳನನ್ನು ರೈತರಿಂದ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೈತರ ಬೆಳೆ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಕಳ್ಳತನ ಪ್ರಕರಣಗಳನ್ನು ನಿಯಂತ್ರಿಸಬೇಕು ಎಂಬ ಬೇಡಿಕೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP