
ಮಂಗಳೂರು, 10 ಜನವರಿ (ಹಿ.ಸ.) :
ಆ್ಯಂಕರ್ : ಸರ್ಕಾರಿ ಉದ್ಯೋಗಿಗಳ ಕಷ್ಟದ ಹಣವನ್ನೂ ಬಿಡದೆ ‘ಪಿಎಂ ಕೇರ್’ ಹೆಸರಿನಲ್ಲಿ ವಸೂಲಿ ಮಾಡಿದ ಬಿಜೆಪಿಯವರು ಮಹಾ ವಂಚಕರು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ಹೆಸರನ್ನು ಹಾಗೂ ಭಾರತ ಸರ್ಕಾರದ ಲಾಂಛನವನ್ನು ಬಳಸಿ ಚುನಾವಣಾ ಬಾಂಡ್ ಹೆಸರಿನಲ್ಲಿ ನಡೆಸಿದ ‘ಬ್ರಹ್ಮಾಂಡ ಭ್ರಷ್ಟಾಚಾರ’ ಅಕ್ಷಮ್ಯ ಅಪರಾಧವಾಗಿದೆ. ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆದಿರುವ ಚುನಾವಣಾ ಬಾಂಡ್ ಹಗರಣವು ದೇಶ ಕಂಡ ಅತಿದೊಡ್ಡ ರಾಜಕೀಯ ಭ್ರಷ್ಟಾಚಾರ ಎಂದು ಅವರು ಹೇಳಿದರು.
ವಸೂಲಿ ರಾಜಕೀಯದ ವಕ್ತಾರರಾಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಈ ಹಗರಣಗಳ ಕುರಿತು ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದ ಸಚಿವರು, “ನಮ್ಮನ್ನು ಪ್ರಶ್ನಿಸುವ ಮೊದಲು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಲು ಧೈರ್ಯವಿದೆಯೇ?” ಎಂದು ಸವಾಲು ಹಾಕಿದರು.
ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ಎಷ್ಟು ಹಣ ವಸೂಲಿ ಮಾಡಿದೆ?
ಪಿಎಂ ಕೇರ್ ನಿಧಿಯ ನಿಜವಾದ ಕಥೆಯೇನು? ಲೆಕ್ಕ ನೀಡಲು ಯಾಕೆ ಹಿಂದೇಟು? ಯಾರ ಭಯ?
ಪಿಎಂ ಕೇರ್ ಹೆಸರಿನಲ್ಲಿ ಸರ್ಕಾರದ ಲಾಂಛನವನ್ನು ದುರುಪಯೋಗ ಮಾಡಿದ್ದು ಯಾರ ಸ್ವಾರ್ಥಕ್ಕಾಗಿ?
ಹಗರಣವೇ ಅಲ್ಲದ ನ್ಯಾಷನಲ್ ಹೆರಾಲ್ಡ್ ವಿಷಯವನ್ನು ಮುಂದಿಟ್ಟು ನೈಜ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ತಿರುಗಿಸುವವರು, ದೇಶದಲ್ಲಿ ಲಂಚಬಾಕತನಕ್ಕೆ ಹೊಸ ರೂಪ ಕೊಟ್ಟಿರುವ ಭ್ರಷ್ಟಾಚಾರದ ಪಿತಾಮಹರಿಂದ ನಮಗೆ ನೈತಿಕತೆಯ ಪಾಠ ಅಗತ್ಯವಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಮೊದಲು ನಿಮ್ಮ ಲೂಟಿಯ ಇತಿಹಾಸವನ್ನು ಜನರ ಮುಂದೆ ಇಡಲಿ. ಅದಕ್ಕೆ ಧೈರ್ಯವಿದೆಯೇ ಎಂದು ಅವರು ಪ್ರಶ್ನಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa