ಮನರೇಗಾ ಬಹಿರಂಗ ಚರ್ಚೆಗೆ ಸವಾಲು ಎಸೆದ ಎನ್‌ಡಿಎ ನಾಯಕರಿಗೆ ಕಾಂಗ್ರೆಸ್ ತಿರುಗೇಟು
ಪ್ರತಿ
ಮನರೇಗಾ ಬಹಿರಂಗ ಚರ್ಚೆಗೆ ಸವಾಲು ಎಸೆದ ಎನ್‌ಡಿಎ ನಾಯಕರಿಗೆ ಕಾಂಗ್ರೆಸ್ ತಿರುಗೇಟು


ಬೆಂಗಳೂರು, 11 ಜನವರಿ (ಹಿ.ಸ.) :

ಆ್ಯಂಕರ್ : ಮನರೇಗಾ ಯೋಜನೆ ಕುರಿತಂತೆ ಬಹಿರಂಗ ಚರ್ಚೆಗೆ ಸಿದ್ಧವೆಂದು ಹೇಳಿರುವ ಕರ್ನಾಟಕದ ಎನ್‌ಡಿಎ ನಾಯಕರು ತಮ್ಮದೇ ಬೌದ್ಧಿಕ ದಿವಾಳಿತನವನ್ನು ಬಹಿರಂಗಪಡಿಸಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ತೀವ್ರವಾಗಿ ಟೀಕಿಸಿದೆ.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನ ಸಭೆಯ ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, “ಮನರೇಗಾ ಕುರಿತು ಚರ್ಚೆಗೆ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರ ಈಗಾಗಲೇ ವಿಶೇಷ ವಿಧಾನ ಸಭಾ ಅಧಿವೇಶನದ ಮೂಲಕ ಮುಕ್ತ ಅವಕಾಶ ಕಲ್ಪಿಸಿದೆ” ಎಂದು ಸ್ಪಷ್ಟಪಡಿಸಿದರು.

ಲೋಕ ಸಭೆ ಮತ್ತು ರಾಜ್ಯ ಸಭೆಗಳಲ್ಲಿ ಮನರೇಗಾ ಕುರಿತು ಪ್ರತಿ ಪಕ್ಷಗಳು ಚರ್ಚೆಗೆ ಮುಂದಾದಾಗ ಪಲಾಯನ ಮಾಡಿರುವ ಕೇಂದ್ರ ಸರ್ಕಾರಕ್ಕೆ ಬಹುಶಃ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೇ ಸಲಹೆ ನೀಡಬೇಕಿದೆ ಎಂದು ಅವರು ವ್ಯಂಗ್ಯವಾಡಿದರು.

ವಿಧಾನ ಸಭೆಯಲ್ಲೇ ಚರ್ಚೆಗೆ ಬರಲಿ – ಕಾಂಗ್ರೆಸ್ ಸವಾಲು

ಜನವಿರೋಧಿ ರೂಪ ಪಡೆದಿರುವ ಮನರೇಗಾ ಕಾಯಿದೆಯನ್ನು ಬಹಿರಂಗಗೊಳಿಸುವ ಉದ್ದೇಶದಿಂದ ಕರ್ನಾಟಕದಲ್ಲಿ ವಿಧಾನ ಸಭೆಯ ವಿಶೇಷ ಅಧಿವೇಶನ ಕರೆಯಲಾಗುತ್ತಿದೆ. ಬಹಿರಂಗ ಚರ್ಚೆಗೆ ಅಲ್ಲಿ ಸಂಪೂರ್ಣ ಅವಕಾಶವಿದೆ. ಎಚ್.ಡಿ. ಕುಮಾರಸ್ವಾಮಿಯವರಿಗೆ ನಿಜವಾಗಿಯೂ ಕರ್ನಾಟಕದ ಬಗ್ಗೆ ಆಸಕ್ತಿ ಇದ್ದರೆ, ಲೋಕ ಸಭೆಯ ಬದಲು ಗೌರವಾನ್ವಿತ ರಾಷ್ಟ್ರಪತಿಗಳಿಂದ ವಿಶೇಷ ಅನುಮತಿ ಪಡೆದು ಕರ್ನಾಟಕ ವಿಧಾನ ಸಭೆಯಲ್ಲೇ ಚರ್ಚೆಗೆ ಬರಲಿ ಎಂದು ರಮೇಶ್ ಬಾಬು ಸವಾಲು ಹಾಕಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande