
ಮಂಗಳೂರು, 10 ಜನವರಿ (ಹಿ.ಸ.) :
ಆ್ಯಂಕರ್ : ಕರಾವಳಿ ಪ್ರದೇಶವು ಸೌಂದರ್ಯ, ಜ್ಞಾನ ಹಾಗೂ ಸಂಪತ್ತಿನ ಪರ್ವತವಾಗಿದ್ದು, ದೈವ–ದೇವಾಲಯಗಳು, ಶಕ್ತಿ ದೇವತೆಗಳ ಕ್ಷೇತ್ರ, ವ್ಯಾಪಾರಿಗಳ ನಿಧಿ ಹಾಗೂ ಪ್ರವಾಸಿಗರ ಸ್ವರ್ಗವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಗಳೂರಿನ ಅತ್ತಾವರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 300 ಕಿ.ಮೀ ಉದ್ದದ ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಹೊಸ ಪ್ರವಾಸೋದ್ಯಮ ನೀತಿಯನ್ನು ರೂಪಿಸುತ್ತಿದೆ ಎಂದರು.
ಇತಿಹಾಸದಲ್ಲಿ ಮಂಗಳೂರು ದೇಶಕ್ಕೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೊಟ್ಟ ನಗರವಾಗಿದ್ದು, ಶಿಸ್ತಿನ ಬ್ಯಾಂಕಿಂಗ್ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಜೊತೆಗೆ ಮಂಗಳೂರು ಶಿಕ್ಷಣ ಕೇಂದ್ರವಾಗಿದ್ದು, ಅಪಾರ ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಪಿಯು ಕಾಲೇಜುಗಳು ಇಲ್ಲಿವೆ ಎಂದು ಹೇಳಿದರು.
ಪರಿಸರ, ಪ್ರಕೃತಿ ಮತ್ತು ಕಡಲತೀರಗಳ ವಿಷಯದಲ್ಲಿ ಗೋವಾ ಮತ್ತು ಮಂಗಳೂರು ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಗೋವಾದಲ್ಲಿರುವ ಬೀಚ್‌ಗಳಂತೆಯೇ ಕರಾವಳಿಯಲ್ಲೂ ಅವಕಾಶಗಳಿವೆ. ಹೀಗಾಗಿ ಕಾನೂನು ಚೌಕಟ್ಟಿನ ಅಡಚಣೆಗಳನ್ನು ಸರಿಪಡಿಸಿ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಕರಾವಳಿಗೆ ಮತ್ತೆ ಜೀವ ತುಂಬುವ ಅಗತ್ಯವಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಒಗ್ಗಟ್ಟಿನೊಂದಿಗೆ ಕೆಲಸ ಮಾಡುವುದೇ ಯಶಸ್ಸಿನ ಮಾರ್ಗ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa