ವಿಜಯಪುರ, 07 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದಿಂದ ಮನೆ-ಮನೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಇದೇ ಸೆಪ್ಟಂಬರ್ 22ರಿಂದ ಅಕ್ಟೋಬರ್ 7ರವರಗೆ ಹಮ್ಮಿಕೊಳ್ಳಲಾಗಿದೆ.
ಸಮೀಕ್ಷೆಯಲ್ಲಿ ಸುಮಾರು 60 ಪ್ರಶ್ನೆಗಳಿದ್ದು, ಸಮೀಕ್ಷೆ ಕಾರ್ಯವನ್ನು ಪಡಿತರ ಚೀಟಿ ಮತ್ತು ಆಧಾರ ಸಂಖ್ಯೆ ಆಧಾರದ ಮೇಲೆ ಕೈಗೊಳ್ಳುವುದರಿಂದ ಸಮೀಕ್ಷಾದಾರರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಡಿತರ ಚೀಟಿ, ಆಧಾರ ಕಾರ್ಡ್, ಅಥವಾ ಆಧಾರ ಕಾರ್ಡಿನ್ ಸಂಖ್ಯೆ, ವಿಕಲಚೇತನರಾಗಿದ್ದಲ್ಲಿ ಅಂಗವಿಕಲರ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನಿಟ್ಟುಕೊಂಡಿರಬೇಕು.
ಕುಟುಂಬದ ಎಲ್ಲ ಸದಸ್ಯರ ಆಧಾರ ಕಾರ್ಡ್‍ಗೆ ಲಿಂಕ್ ಆಗಿರುವ ನಂಬರ್‍ಗಳಿಗೆ ಓಟಿಪಿ ಬರುತ್ತದೆ. ಸಮೀಕ್ಷೆ ಸಂದರ್ಭದಲ್ಲಿ ಮನೆಯ ಸದಸ್ಯರು ಮನೆಯಲ್ಲಿ ಇಲ್ಲದಿದ್ದರೂ ಸದಸ್ಯರಿಗೆ ಫೋನ್ ಮಾಡಿ ಒಟಿಪಿ ಪಡೆದು ಮಾಹಿತಿ ನೀಡಬೇಕಾಗುತ್ತದೆ.
6 ವರ್ಷ ಮೇಲ್ಪಟ್ಟು ಪಡಿತರ ಚೀಟಿ ಇಲ್ಲದಿರುವ ಮತ್ತು ಪಡಿತರ ಚೀಟಿಯಲ್ಲಿ ಹೆಸರು ಇಲ್ಲದಿರುವ ಕುಟುಂಬದ ಸದಸ್ಯರು ಆಧಾರ ಕಾರ್ಡ್ ಕಡ್ಡಾಯವಾಗಿರುವುದರಿಂದ ಆಧಾರ ಕಾರ್ಡ ಇಲ್ಲದಿದ್ದಲ್ಲಿ ಹತ್ತಿರದ ಆಧಾರ ನೊಂದಣಿ ಕೇಂದ್ರಕ್ಕೆ ಭೇಟಿ ನೀಡಿ ನೊಂದಣಿ ಮಾಡಿಸಿ ನೊಂದಣಿ ಸಂಖ್ಯೆಯನ್ನು ಪಡೆದುಕೊಳ್ಳಬೇಕು.
ಆಧಾರ ಕಾರ್ಡ್ ಇದ್ದು, ಲಿಂಕ್ ಆಗಿರುವ ಮೊಬೈಲ್ ಫೋನ್ ನಂಬರ್ ಇಲ್ಲದಿದ್ದರೆ ಹತ್ತಿರದ ಆಧಾರ ನೊಂದಣಿ ಕೇಂದ್ರಕ್ಕೆ ಭೇಟಿ ನಿಡಿ ಪ್ರಸ್ತುತ ಬಳಸುತ್ತಿರುವ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಸಿಕೊಳ್ಳಬೇಕು.
ಪ್ರಶ್ನಾವಳಿಯಲ್ಲಿ ಪ್ರತಿ ಸದಸ್ಯರ ವಿದ್ಯಾರ್ಹತೆ, ಕೌಶಲ್ಯ ತರಬೇತಿಯ ಅಗತ್ಯತೆ, ಆದಾಯ, ಕುಟುಂಬದ ಸ್ಥಿರ ಮತ್ತು ಚರಾಸ್ತಿ ವಿವರಗಳು, ಧರ್ಮ, ಜಾತಿ, ಉಪಜಾತಿ ಹಾಗೂ ಕುಲಕಸುಬು ಮುಂತಾದ ವಿಷಯಗಳು ಸೇರಿದಂತೆ ಎಲ್ಲಾ ಪ್ರಶ್ನೆಗಳಿಗೂ ಕುಟುಂಬದ ಸದಸ್ಯರು ಸರಿಯಾದ ಮಾಹಿತಿಯನ್ನು ನೀಡಬೇಕು.
ಸಮೀಕ್ಷಾ ಕಾರ್ಯ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸಹಾಯವಾಣಿ ಸಂಖ್ಯೆ 8050770004 ಕರೆ ಮಾಡಿ ಅಥವಾ ವೆಬ್‍ಸೈಟ್ https://kscbc.karnataka.gov.in ನ್ನು ಸಂಪರ್ಕಿಸಬಹುದಾಗಿದ್ದು, ಸಮೀಕ್ಷೆಯ ಪ್ರಶ್ನಾವಳಿಯ ಬಗ್ಗೆ ಅರಿವು ಮೂಡಿಸಲು ಪದವಿ ವಿದ್ಯಾರ್ಥಿಗಳ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಸಮೀಕ್ಷಾ ಪೂರ್ವ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande