ಕೋಲಾರ, ೦೭ ಸೆಪ್ಟೆಂಬರ್ (ಹಿ.ಸ)
ಆ್ಯಂಕರ್ : ವಿಶ್ವಪ್ರಸಿದ್ಧ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರ ಕಥಾಸಂಕಲನವಾದ ಎದೆಯ ಹಣತೆಯು ಮನುಕುಲದ ಮತಿ ಬೆಳಗುವ ಅಕ್ಷಯ ಹಣತೆಯೇ ಆಗಿದೆ ಎಂದು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಹಾಗೂ ಕ್ರಿಸ್ತು ಜಯಂತಿ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅಭಿಪ್ರಾಯಪಟ್ಟರು.
ಕೋಲಾರ ಜಿಲ್ಲೆಯ ವೇಮಗಲ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕೋಲಾರ ಜಿಲ್ಲಾ ಚಕೋರ ಬಳಗ ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೂಕರ್ ವಿಜೇತ ಸಾಹಿತಿ ಬಾನುಮುಷ್ತಾಕ್ ಅವರ ಕಥೆಗಳ ಸಾಂಸ್ಕೃತಿಕ ಅನನ್ಯತೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡನೆಲದ ಘನತೆ ಮತ್ತು ವಿವೇಕವನ್ನು ತಮ್ಮ ಬಂಡಾಯ ಸಾಹಿತ್ಯದ ಕೃಷಿಯ ಮೂಲಕ ವಿಶ್ವಮಟ್ಟಕ್ಕೆ ಎತ್ತರಿಸಿದ ಮೇರುದನಿ ಬಾನುಮುಷ್ತಾಕ್ ಅವರು. ಪುರುಷಾಧಿಪತ್ಯದ ಹಲವು ಮುಖಗಳನ್ನು ಯಾವ ಮುಲಾಜಿಲ್ಲದೆ ಮೌಲ್ಯೀಕರಿಸುವ ಇವರ ಕಥೆಗಳು ಮುಸ್ಲಿಂ ಸಂವೇದನೆಯ ಗೆರೆ ದಾಟಿಕೊಂಡು ಮಾನವೀಯ ಸಂವೇದನೆಯ ತುತ್ತತುದಿಗೇರುತ್ತವೆ. ಮಾನವ ಮತಿಗೆ ಅಮರಿಕೊಂಡಿರುವ ಮತೀಯ ಹಾಗೂ ಲಿಂಗೀಯ ವಿಷವಿಳಿಸಿ ಸ್ವಾತಂತ್ರ‍್ಯ-ಸಮಾನತೆ-ಸೋದರತೆ' ಎಂಬೋ ಸಾಂವಿಧಾನಿಕ ತ್ರಿರತ್ನಗಳನ್ನು ಬೆಳಗುವ ಸೃಜನಶೀಲ ಸಂಪತ್ತಾಗಿವೆ ಎಂದು ತಿಳಿಸಿದರು.
ಯಾವ ಧರ್ಮಸೀಮೆಯಲ್ಲಾದರೂ ಹೆಣ್ಣಿನ ಸಂಕಟ ಹೇಳತೀರದು. ಪುರುಷ ಶಾಹಿಯ ಹಿತಾಸಕ್ತಿಗೆ ತಕ್ಕಂತೆ ಹೆಣ್ಣನ್ನು ವ್ಯಾಖ್ಯಾನಿಸಿಕೊಳ್ಳುತ್ತಾ ಬರಲಾಗಿದೆ. ಸದಾ ಅನುಮಾನಿತ ಹಾಗೂ ಅವಮಾನಿತ ನೆಲೆಯಲ್ಲಿ ಕಟಕಟೆಗೇರಿಸುವ ಸಾಂಸ್ಕೃತಿಕ ಯಾಜಮಾನ್ಯ ಸಂರಚನೆಗಳನ್ನು ಒಡೆದು ನ್ಯಾಯನಿಷ್ಠುರಿಯಾಗಿ ನೋಡುತ್ತಾ ಬಂದಿರುವ ಕನ್ನಡದ ಹೆಣ್ಣಕಣ್ಣಿನ ಪ್ರಜ್ಞಾಪರಂಪರೆಯಲ್ಲಿ ಬಾನುಮುಷ್ತಾಕ್ ಅವರ ದನಿಯೂ ದಿಟ್ಟವಾದುದಾಗಿದೆ. ಯಾವ ಬಗೆಯ ಅಧಿಕಾರಸ್ಥಾನವಾಗಲೀ ನ್ಯಾಯಬಿಟ್ಟು ನಡೆದರೆ ಶ್ರೀಸಾಮಾನ್ಯರ ಪ್ರತಿರೋಧ ಶತಸ್ಸಿದ್ಧ ಎಂಬುದನ್ನು ಅವರ ಕತೆಗಳು ಪ್ರತಿಧ್ವನಿಸುತ್ತವೆ ಎಂದರು.
ವ್ಯವಹಾರಿಕ ಜಗತ್ತಿನಲ್ಲಿ ಕಣ್ಮರೆಯಾಗುತ್ತಿರುವ ಜೀವಮೈತ್ರಿ ಮತ್ತು ಜೀವನಮೈತ್ರಿಯನ್ನು ಜೀವಸೆಲೆಯಾಗಿಸಿಕೊಳ್ಳುವ ಆಶಯದಲ್ಲಿ ಬಾನುಮುಷ್ತಾಕ್ ಅವರ ಕಥೆಗಳು ಮಿಡಿಯುತ್ತವೆ. ಅಂತರAಗವನ್ನು ಕಲಕಿ ಅರಿವಿನ ಹಣತೆಯನ್ನು ಹಚ್ಚುತ್ತವೆ. ನೊಂದ ಸ್ತ್ರೀ ಹಾಗೂ ಕಾಯಕಜೀವಿ ಮೊದಲಾದ ಪಾತ್ರಗಳು ವಿಷಾದದಿಂದ ಅಂತ್ಯಗೊಳ್ಳದೆ ಬದುಕಿನ ಭರವಸೆಯನ್ನು ಬೆಳಗುತ್ತವೆ. ಇಂತಹ ಎದೆಯ ಹಣತೆಗಳು ನಮ್ಮೊಳಗೂ ಸದಾ ಬೆಳಗುತ್ತಿರಲಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ಚಂದ್ರಶೇಖರ್ ಅವರು ಮಾತನಾಡಿ, ಹೊಸತಲೆಮಾರಿನ ಯುವಕರು ಯಾವುದೇ ಜಾತಿ, ಮತ, ಲಿಂಗ ಭೇಧಗಳನ್ನು ಮಾಡದೆ ವಿಶ್ವಮಾನವರಾಗಿ ಬೆಳೆಯಬೇಕು. ಹೆಚ್ಚು ಹೆಚ್ಚು ಜ್ಞಾನ ಸಂಪಾದನೆ ಮಾಡುತ್ತಾ ಮಾನವಂತರಾಗಿ ಬಾಳುವಂತಾಗಬೇಕು. ಇಂತಹ ಬಾಳಿನ ಬೆಳವಣಿಗೆಗೆ ಕನ್ನಡ ಸಾಹಿತ್ಯವು ಸಹಕಾರಿಯಾಗಿದೆ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕೋಲಾರ ಜಿಲ್ಲಾ ಚಕೋರ ಬಳಗದ ಸಂಚಾಲಕರಾದ ಡಾ.ಜಯಮಂಗಲ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕರಾದ ಸೈಯದ್ ಕರೀಂ, ಶಿಕ್ಷಕರೂ ಕವಿಗಳೂ ಆದ ಡಾ.ಇಂಚರ ನಾರಾಯಣಸ್ವಾಮಿ, ಕವಿ ಹಾಗೂ ಹೋರಾಟಗಾರರಾದ ಮಾಸ್ತಿ ಜಗನ್ನಾಥ್ ಅವರು ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ.ಮಾಲ ಕೆ.ಎಸ್., ಐಕ್ಯುಎಸಿ ಸಂಚಾಲಕರಾದ ಸುನಿಲ್ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥರಾದ ನಾಗೇಂದ್ ಎಂ.ಎನ್., ಉಪನ್ಯಾಸಕರಾದ ಡಾ.ನಂಜಪ್ಪ, ಶಿಕ್ಷಕರಾದ ಎಂ.ವೆ0ಕಟೇಶಮೂರ್ತಿ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾರಿಗಾನಹಳ್ಳಿ ಶ್ರೀನಿವಾಸ್, ಗಾಯಕ ನಾಗರಾಜ್ ವೇಮಗಲ್ ಅವರು ಉಪಸ್ಥಿತರಿದ್ದರು. ಶಿಕ್ಷಕರಾದ ಅರಳೇರಿ ಅಮಿತ್ ಅವರು ಜಾನಪದ ಮತ್ತು ಭಾವಗೀತೆಗಳನ್ನು ಗಾಯನ ಮಾಡಿದರು.
ಚಿತ್ರ : ಕೋಲಾರ ಜಿಲ್ಲೆ ವೇಮಗಲ್ ಸರ್ಕಾರಿ ಕಾಲೇಜಿನಲ್ಲಿ ಕೋಲಾರ ಜಿಲ್ಲಾ ಚಕೋರ ಬಳಗ ಬೂಕರ್ ವಿಜೇತ ಸಾಹಿತಿ ಬಾನುಮುಷ್ತಾಕ್ ಅವರ ಕಥೆಗಳ ಸಾಂಸ್ಕೃತಿಕ ಅನನ್ಯತೆ ಕುರಿತು ಡಾ. ಕುಪ್ಪಳ್ಳಿ ಭೈರಪ್ಪ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್