ಬೆಂಗಳೂರು, 07 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಒಂದು ದೇಶ ಒಂದು ಚುನಾವಣೆಯು ಇಂದಿನ ಕಾಲಘಟ್ಟದಲ್ಲಿ ಅತ್ಯಗತ್ಯವಾಗಿದೆ. ಇದು ರಾಜ್ಯ ಹಾಗೂ ದೇಶದ ಹಿತಕ್ಕಾಗಿ ಕೈಗೊಳ್ಳಬೇಕಾದ ಮಹತ್ವದ ಹೆಜ್ಜೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಒಂದು ದೇಶ ಒಂದು ಚುನಾವಣೆ ಕ್ರಮವು ಆಡಳಿತ ಸುಧಾರಣೆಗೆ ದಾರಿ ಮಾಡಿಕೊಡುವುದರ ಜೊತೆಗೆ ಸಾವಿರಾರು ಕೋಟಿ ರೂಪಾಯಿ ಖರ್ಚನ್ನು ಉಳಿಸುತ್ತದೆ. ಕೆಟ್ಟ ವಿಚಾರಗಳು ತಕ್ಷಣ ಜನರಿಗೆ ತಲುಪುತ್ತವೆ. ಆದರೆ ಒಳ್ಳೆಯ ವಿಚಾರ ಜನರನ್ನು ತಲುಪಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದ್ದರಿಂದ ಜಿಲ್ಲೆ ಹಾಗೂ ಕ್ಷೇತ್ರಗಳಲ್ಲಿ ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಬೇಕು. ಕಾಲೇಜುಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ನಡುವೆ ಚರ್ಚೆಗಳನ್ನು ನಡೆಸಬೇಕು ಎಂದು ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಾಯಕತ್ವದಲ್ಲಿ ಭಾರತವು ಅತ್ಯಂತ ವೇಗದಲ್ಲಿ ಬೆಳೆಯುತ್ತಿದೆ. ಇನ್ನೂ ಕೆಲವು ವರ್ಷಗಳಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಿ ಜಗತ್ತಿನ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬುದನ್ನು ಸಮೀಕ್ಷಾ ವರದಿ ಹೇಳುತ್ತಿದೆ. ಇದನ್ನು ಅಮೆರಿಕ ಸಹಿಸಿಕೊಳ್ಳದಿದ್ದರೆ ಅರ್ಥವಿದೆ. ಆದರೆ ಈ ದೇಶದ ಮಣ್ಣಿನ ಋಣ, ಅನ್ನದ ಋಣ ಪಡೆದ ರಾಹುಲ್ ಗಾಂಧಿ ಹಾಗೂ ನಮ್ಮ ಮುಖ್ಯಮಂತ್ರಿಯವರು ಸಹಿಸಲು ಆಗುತ್ತಿಲ್ಲ ಎಂದರೆ ಇದು ದೇಶದ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa