ರಾಯಚೂರು, 07 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಸಕ್ತ 2025-26ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವು ನಾನಾ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 10ರೊಳಗೆ ನಡೆಯಲಿದೆ.
ರಾಯಚೂರು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ಈ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಿದ್ದು ಕಡ್ಡಾಯವಾಗಿ ಇಲಾಖೆಯ ಆನ್‌ಲೈನ್ ಲಿಂಕ್‌ನಲ್ಲಿ ನೋಂದಣಿ ಮಾಡಬೇಕು.
ಇದುವರೆಗೆ ನೋಂದಣಿ ಆಗದೇ ಇರುವ ಕ್ರೀಡಾಪಟುಗಳಿಗೆ ವಿಭಾಗ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ರಾಯಚೂರು ಜಿಲ್ಲೆಯಲ್ಲಿ ವಿಜೇತರಾದ ಕ್ರೀಡಾಪಟುಗಳು ಸೆ.09ರೊಳಗಾಗಿ ಕಡ್ಡಾಯವಾಗಿ ಆನ್‌ಲೈನ್ ಲಿಂಕ್‌ನಲ್ಲಿ ನೋಂದಣಿ ಮಾಡಬೇಕು.
ಆನ್‌ಲೈನದಲ್ಲಿ ಅರ್ಜಿ ಹಾಕಿದ ಬಗ್ಗೆ ಪ್ರತಿಯನ್ನು ಕ್ರೀಡಾಕೂಟ ಸಂಘಟಕರಿಗೆ ಕ್ರೀಡಾಕೂಟದಿನದಂದು ಮುಂಚಿತವಾಗಿ ಸಲ್ಲಿಸಿ ವರದಿ ಮಾಡಿ ಹೆಸರು ನೋಂದಾಯಿಸಬೇಕು.
ಹೆಚ್ಚಿನ ವಿವರಗಳಿಗಾಗಿ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಇರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿ ಅಥವಾ ಮೊಬೈಲ್ ಸಂಖ್ಯೆ: 7338647270ಗೆ ಸಂಪರ್ಕಿಸಬಹುದಾಗಿದೆ.
ಯಾವ ಜಿಲ್ಲೆಯಲ್ಲಿ ಯಾವ ಕ್ರೀಡೆ: ಕಲಬುರಗಿ ವಿಭಾಗದ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ಕ್ರೀಡೆಗಳನ್ನ ಆಯೋಜನೆ ಮಾಡಲಾಗುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಬಾಸ್ಕೆಟ್‌ಬಾಲ್, ಹ್ಯಾಂಡ್‌ಬಾಲ್, ಅಥ್ಲೆಟಿಕ್ಸ್, ಸ್ವಿಮ್ಮಿಂಗ್, ಜೂಡೋ, ಫುಟ್‌ಬಾಲ್ ಹಾಗೂ ಟೆನ್ನಿಸ್ ಕ್ರಿಡೆಗಳನ್ನು ನಡೆಸಲಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಟೆಕ್ವಾಂಡೋ, ನೆಟ್‌ಬಾಲ್ ಹಾಗೂ ಕುಸ್ತಿ ಕ್ರೀಡೆಗಳನ್ನು, ಬಳ್ಳಾರಿ ಜಿಲ್ಲೆಯಲ್ಲಿ ಹಾಕಿ, ವುಷು, ಕಬಡ್ಡಿ ಹಾಗೂ ಬಾಕ್ಸಿಂಗ್ ಕ್ರೀಡೆಗಳನ್ನು, ರಾಯಚೂರು ಜಿಲ್ಲೆಯಲ್ಲಿ ಬಾಲ್ ಬ್ಯಾಡ್ಮಿಂಟನ್, ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನ್ನಿಸ್ ಕ್ರೀಡೆಗಳನ್ನು ಹಾಗೂ ಬೀದರ್ ಜಿಲ್ಲೆಯಲ್ಲಿ ವಾಲಿಬಾಲ್ ಹಾಗೂ ಯೋಗ ಕ್ರೀಡೆಗಳನ್ನು ಮತ್ತು ಯಾದಗಿರಿ ಜಿಲ್ಲೆಯಲ್ಲಿ ವ್ಹೇಟ್ ಲಿಫ್ಟಿಂಗ್, ಖೋ-ಖೋ ಹಾಗೂ ಥ್ರೋ-ಬಾಲ್ ಕ್ರೀಡೆಗಳನ್ನು ನಡೆಸಲಾಗುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವೀರೇಶ ನಾಯಕ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್