ಬಳ್ಳಾರಿ, 07 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಸವಾದಿ ಶರಣರ ತಾತ್ವಿಕ ಚಿಂತನೆಗಳು ಸರ್ವಕಾಲಿಕವಾದ ಜೀವನ ಮೌಲ್ಯಗಳನ್ನು ತಿಳಿಸುತ್ತವೆ ಎಂದು ಗದಗ ತೋಂಟದಾರ್ಯ ಮಠದ ಜಗದ್ಗುರು ಸಿದ್ಧರಾಮ ಸ್ವಾಮಿಗಳು ತಿಳಿಸಿದ್ದಾರೆ.
`ಬಸವ ಸಂಸ್ಕೃತಿ ಅಭಿಯಾನ'ವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜಮುಖಿ ಆದರ್ಶ ವ್ಯಕ್ತಿಯಾಗಬೇಕು. ವಚನ ಸಂಸ್ಕøತಿ, ವಚನ ಸಾಹಿತ್ಯ, ವಚನ ಸಾರವನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದು.
ಪ್ರೇಮಕ್ಕ ಅಂಗಡಿ ಅವರು, ಶರಣ ಪಥದ ನಿಜಾಚಾರಣೆಗಳ ಕುರಿತಾಗಿ ಉಪನ್ಯಾಸ ನೀಡಿದರು. ಶೇಗುಣಸಿಯ ಬಸವಪ್ರಭು ಸ್ವಾಮೀಜಿ ಅವರು, ಕನ್ನಡ ಸಾಹಿತ್ಯದ ಜೀವಸತ್ವವೇ ವಚನ ಸಾಹಿತ್ಯವಾಗಿದೆ. ವಚನ ಸಾಹಿತ್ಯ ಇಲ್ಲದೇ ಕನ್ನಡ ಸಾಹಿತ್ಯವೇ ಇಲ್ಲ. ಕಾರಣ ಕನ್ನಡ ಸಾಹಿತ್ಯದ ಏಳ್ಗೆ, ಪ್ರಸ್ತುತತೆ ಮತ್ತು ಪ್ರಚಲಿತಕ್ಕೆ ವಚನ ಸಾಹಿತ್ಯದ ಪಾತ್ರವನ್ನು ಮರೆಯುವಂತಿಲ್ಲ ಎಂದರು.
ಶಾಸಕ ನಾರಾ ಭರತರೆಡ್ಡಿ ಅವರು, ಬಳ್ಳಾರಿಯ ಸಂಗನಕಲ್ಲು ರಸ್ತೆಯ ವೃತ್ತದಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಅಶ್ವಾರೂಢ ಬಸವಣ್ಣನವರ ಕಂಚಿನ ಪುತ್ಥಳಿಯನ್ನು ಶೀಘ್ರದಲ್ಲೇ ಪ್ರತಿಷ್ಠಾಪಿಸಲಾಗುತ್ತದೆ ಎಂದರು.
ಸಭೆಯ ದಿವ್ಯ ಸಾನಿಧ್ಯ ವಹಿಸಿದ್ದ ಭಾಲ್ಕಿಯ ಸಂಸ್ಥಾನ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಅವರು,
ಬಸವಾದಿ ಶರಣರು ಕಟ್ಟ ಬಯಸಿದ್ದ ಸರ್ವರೀತಿಯ ಶೋಷಣಾ ಮುಕ್ತ ಸಮಾನತೆಯ ಸಮ ಸಮಾಜದ ನಿರ್ಮಾಣದ ಕನಸನ್ನು ನನಸು ಮಾಡುವ ಪ್ರಯತ್ನವೇ `ಬಸವ ಸಂಸ್ಕೃತಿ ಅಭಿಯಾನ'. ಪ್ರತಿಯೊಬ್ಬರೂ ಜನಗಣತಿಯಲ್ಲಿ `ಲಿಂಗಾಯಿತ' ಎಂದು ನಮೂದಿಸಬೇಕು ಎಂದರು.
ಉರುವಕೊಂಡ ಜಗದ್ಗುರು ಕರಿಬಸವರಾಜೇಂದ್ರ ಸ್ವಾಮಿಗಳು, ಸಂಡೂರಿನ ವಿರಕ್ತಮಠದ ಪ್ರಭುಸ್ವಾಮಿಗಳು, ಹಂದಿಗುಂದದ ಶಿವಾನಂದ ಸ್ವಾಮೀಜಿ, ಭಾಲ್ಕಿಯ ಗುರು ಬಸವ ಪಟ್ಟದ್ದೇವರು, ವಿಧಾನ ಪರಿಷತ್ತಿನ ಸದಸ್ಯ ವೈ.ಎಂ. ಸತೀಶ್, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕರಾದ ಜಿ. ಸೋಮಶೇಖರ್ ರೆಡ್ಡಿ, ರಾಮಚಂದ್ರ ರೆಡ್ಡಿ, ಬುಡಾ ಮಾಜಿ ಅಧ್ಯಕ್ಷ ಡಾ. ವೆಂಕಟ್ ವಿ. ಮಹಿಪಾಲ, ಜಾಗತೀಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಎನ್.ಜಿ. ಬಸವರಾಜಪ್ಪ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಣೇಕಲ್ಲು ಮಹಾಂತೇಶ, ರಾಷ್ಟ್ರೀಯ ಬಸವದಳದ ಕೆ.ವಿ. ರವಿಶಂಕರ ಸೇರಿ ಅನೇಕರು ವೇದಿಕೆಯಲ್ಲಿದ್ದರು.
ಲೆಕ್ಕಪರಿಶೋಧಕ ಸಿರಿಗೇರಿ ಪನ್ನಾರಾಜ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಸಾಣೇಹಳ್ಳಿ ಶಿವಸಂಚಾರ ತಂಡವು `ಜಂಗಮದೆಡೆಗೆ' ಸಾಂಸ್ಕøತಿಕ ನಾಟಕವನ್ನು ಪ್ರದರ್ಶನ ಮಾಡಿತು.
ಸಂಗನಕಲ್ಲು ರಸ್ತೆಯಲ್ಲಿ `ಬಸವ ಜ್ಯೋತಿ ರಥ ಯಾತ್ರೆ'ಯನ್ನು ವಿಧಾನಪರಿಷತ್ತು ಸದಸ್ಯ ವೈ.ಎಂ. ಸತೀಶ್ ಅವರು ಸ್ವಾಗತಿಸಿದರು. ವೀರಶೈವ ಲಿಂಗಾಯಿತ ಸಮಾಜದ ಸಾವಿರಾರು ಜನರು ಸಭೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್