ಬೆಂಗಳೂರು, 07 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಸರ್ಕಾರ ಮುಂದಾಗಿರುವುದಕ್ಕೆ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬ್ಯಾಲೆಟ್ ಪೇಪರ್ = ಬೋಗಸ್ ವೋಟಿಂಗ್, ಬ್ಯಾಲೆಟ್ ಪೇಪರ್ = ಬೂತ್ ಕ್ಯಾಪ್ಚರಿಂಗ್” ಎಂದು ಕಿಡಿಕಾರಿದ್ದಾರೆ.
ಹ್ಯಾಟ್ರಿಕ್ ಝೀರೋ ರಾಹುಲ್ ಗಾಂಧಿ ನೇತೃತ್ವದಲ್ಲಿ ನೆಲಕಚ್ಚಿರುವ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿಯನ್ನು ರಕ್ಷಿಸಲು ಚುನಾವಣಾ ಪ್ರಕ್ರಿಯೆ, ಮತಯಂತ್ರಗಳ ಬಗ್ಗೆ ಇಲ್ಲಸಲ್ಲದ ಅನುಮಾನ ಮೂಡಿಸುತ್ತಿದೆ. ಆದರೆ ಪ್ರಜ್ಞಾವಂತ ಮತದಾರರು ಈ ಹತಾಶ ಪ್ರಯತ್ನವನ್ನು ಯಾವತ್ತೂ ತಿರಸ್ಕರಿಸಿದ್ದಾರೆ ಎಂದಿದ್ದಾರೆ.
2004ರಲ್ಲಿ ಯುಪಿಎ-1, 2009ರಲ್ಲಿ ಯುಪಿಎ-2, 2013ರಲ್ಲಿ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿ, 2023ರಲ್ಲಿ ಎರಡನೇ ಬಾರಿ ಮುಖ್ಯಮಂತ್ರಿ – ಎಲ್ಲವೂ ಇದೇ ಮತಯಂತ್ರಗಳಿಂದ ನಡೆದವು. ಈಗ ಅದೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿ ಓಬೀರಾಯ ಕಾಲದ ಮತಪೆಟ್ಟಿಗೆಗೆ ಮರಳುವ ನಿರ್ಧಾರ ತೀರಾ ಕೆಳಮಟ್ಟದದ್ದು. ಇದು ರಾಹುಲ್–ಸೋನಿಯಾ ಗಾಂಧಿಗಳನ್ನು ಮೆಚ್ಚಿಸಲು, ಕುರ್ಚಿ ಉಳಿಸಿಕೊಳ್ಳಲು ಕೈಗೊಂಡ ನಿರ್ಧಾರ ಎಂದು ಅಶೋಕ ಆರೋಪಿಸಿದ್ದಾರೆ.
ಗೆದ್ದಾಗ ಬೀಗುವುದು, ಸೋತಾಗ ವ್ಯವಸ್ಥೆಯನ್ನು ದೂಷಿಸುವುದು ಪ್ರಜಾಪ್ರಭುತ್ವಕ್ಕೆ ಅಪಮಾನ. ಸಿದ್ದರಾಮಯ್ಯ ಅವರು ಸಂವಿಧಾನವಾದಿ ಎಂಬ ಹೆಸರನ್ನು ಬಯಸುತ್ತಾರೋ, ಇಲ್ಲವೇ ಹೈಕಮಾಂಡ್ ಗುಲಾಮಗಿರಿಯ ಕಳಂಕ ಬಯಸುತ್ತಾರೋ ಜನತೆ ನೋಡುತ್ತಿದ್ದಾರೆ. ಚುನಾವಣಾ ಪ್ರಕ್ರಿಯೆಯ ಮೇಲಿನ ಸಂದೇಹ ಪ್ರಜಾಪ್ರಭುತ್ವಕ್ಕೆ ಶೋಭೆ ತರದು ಎಂದು ಅಶೋಕ್ ಎಚ್ಚರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa