ಬೆಂಗಳೂರು, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಲಾಭಕ್ಕಾಗಿ ಒಳಮೀಸಲಾತಿ ಜಾರಿ ಮಾಡಿದ್ದು, ಸುಪ್ರೀಂ ಕೋರ್ಟ್ ಆದೇಶ ಹಾಗೂ ನ್ಯಾ. ನಾಗಮೋಹನ ದಾಸ್ ವರದಿ ಪಾಲನೆ ಮಾಡದೇ ಸಾಮಾಜಿಕ ಅನ್ಯಾಯ ಮಾಡಿದ್ದು, ಮೀಸಲಾತಿ ವಂಚಿತ ಸಮುದಾಯಗಳಿಗೆ ನ್ಯಾಯ ಕೊಡಿಸಲು ಬಿಜೆಪಿ ಹೋರಾಟ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ವರ್ಗಗಳು ಧುಮುಕಬೇಕು ಎಂದು ಮಹಾತ್ಮಾ ಗಾಂಧಿ ಬಯಕೆ ಆಗಿತ್ತು ಆಗ ಡಾ. ಬಿ. ಆರ್. ಅಂಬೇಡ್ಕರ್ ಅವರು ತುಳಿತಕ್ಕೊಳ್ಳಗಾದ ಜನರ ಪರಿಸ್ಥಿತಿ ಏನು ಎಂದು ಪ್ರಶ್ನೆ ಮಾಡಿದರು. ಆಗ ಮಹಾತ್ಮಾ ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಪುಣೆಯಲ್ಲಿ ಒಂದು ವಾರ ಚರ್ಚೆ ಮಾಡಿ ಹಲವಾರು ವಿಚಾರಗಳನ್ನು ಮಹಾತ್ಮಾಗಾಂಧಿ ಒಪ್ಪಿದರು. ಕೆಲವು ವಿಚಾರಗಳಲ್ಲಿ ತಕ್ಷಣ ನ್ಯಾಯ ಕೊಡಿಸುವುದು ಕಷ್ಟ ಮುಂದಿನ ದಿನಗಳಲ್ಲಿ ನ್ಯಾಯ ಕೊಡಿಸಬಹುದು ಎಂದರು ಅದನ್ನು ಪೂಣಾ ಫ್ಯಾಕ್ಟ್ ಅಂತ ಕರೆಯುತ್ತಾರೆ. ಆಗ ಎಲ್ಲ ಸಮುದಾಯಗಳು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡವು. ಸಂವಿಧಾನ ರಚನೆಯ ಸಂದರ್ಭದಲ್ಲಿ ಪೂಣಾ ಫ್ಯಾಕ್ಟ್ ಆಧಾರದಲ್ಲಿ ಮೀಸಲಾತಿ ತೀರ್ಮಾನ ಮಾಡಲಾಯಿತು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟದ ಫಲಾನುಭವಿಗಳು. ಅವರು ತಮ್ಮ ರಾಜಕೀಯ ಲಾಭಕ್ಕೆ ಒತ್ತು ಕೊಟ್ಟರು. ಸಂವಿಧಾನದಲ್ಲಿ ಅಂಬೇಡ್ಕರ್ ಅವರು ಸೇರಿಸಿರುವ ಅಂಶಗಳನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಮೀಸಲಾತಿ ನಿರಂತರ ಅವರ ಸಮುದಾಯಕ್ಕೆ ತಕ್ಕಂತೆ ನೀಡಬೇಕು ಎಂದು ತೀರ್ಮಾನಿಸಲಾಯಿತು. ಕಾಂಗ್ರೆಸ್ ಎಸ್ಸಿ ಸಮುದಾಯಗಳನ್ನು ಸೇರಿಸಿತು. ಆದರೆ, ಮೀಸಲಾತಿ ಹೆಚ್ಚಳ ಮಾಡಲಿಲ್ಲ. ರಾಜ್ಯದಲ್ಲಿ ಎಸ್ಸಿ ಪ್ರವರ್ಗದಲ್ಲಿ ಆರು ಜಾತಿ ಇದ್ದಿದ್ದು ಈಗ 101 ಜಾತಿಗಳಾಗಿವೆ. ಕಾಂಗ್ರೆಸ್ ಮೀಸಲಾತಿ ಹೆಚ್ಚಳ ಮಾಡದೇ ಅನ್ಯಾಯ ಮಾಡಿತು. ಇದರಿಂದ ಅಸಮಾಧಾನ ಹೆಚ್ಚಾಯಿತು. ಒಳ ಮೀಸಲಾತಿಗೆ ಆಂಧ್ರದಲ್ಲಿ ಚಳವಳಿ ಆರಂಭವಾಗಿ ಕರ್ನಾಟಕಕ್ಕೂ ಹಬ್ಬಿತು ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ನ್ಯಾ. ನಾಗಮೋಹದಾಸ್ ಸಮಿತಿ ರಚನೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವರದಿ ಸಲ್ಲಿಸಲು ಕಾಲ ಮಿತಿ ನಿಗದಿ ಮಾಡಿದರು. ನಾನು ಮುಖ್ಯಮಂತ್ರಿ ಇದ್ದಾಗ ನವೆಂಬರ್ 2022 ರಲ್ಲಿ ಎಸ್ಸಿ ಶೇ15 ರಿಂದ ಶೇ17 ಕ್ಕೆ ಹೆಚ್ಚಳ ಮಾಡಿದೆ. ಎಸ್ಟಿಗೆ ಶೇ 3 ರಿಂದ ಶೇ 7 ಕ್ಕೆ ಹೆಚ್ಚಳ ಮಾಡಿದ್ದೇವು. ಅದು ಲ್ಯಾಂಡ್ ಮಾರ್ಕ್ ತೀರ್ಮಾನ ಆಗಿದೆ ಎಂದು ಹೇಳಿದರು.
ಆಗ ಪ್ರತಿ ಪಕ್ಚದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಮೀಸಲಾತಿ ಹೆಚ್ಚಳ ಆಗಿಲ್ಲವೆಂದು ಹೇಳಿಕೊಂಡು ತಿರುಗಾಡಿದರು. ಅದಕ್ಕೆ ಸಂವಿಧಾನ ತಿದ್ದುಪಡಿ ಆಗಬೇಕು ಎಂದು ಹೇಳಿದರು. ಮುಖ್ಯಮಂತ್ರಿ ಆದಾಗಲೂ ಅದನ್ನೇ ಹೇಳಿದರು. ಇದರ ನಡುವೆ ನಮ್ಮ ಅವಧಿಯಲ್ಲಿ ಆಗಿರುವ ತೀರ್ಮಾನದ ಆಧ್ಯಯನ ಮಾಡಿ ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ನ್ಯಾಯ ನೀಡಲು ಬದ್ದರಾಗಿ ಸಾಲಿಸಿಟರ್ ಜನರಲ್ ಅವರು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಿದರು. ಅದರ ಆಧಾರದಲ್ಲಿ ರಾಜ್ಯಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ನೀಡಿ ಡಿಸೆಂಬರ್ 1, 2024 ರಲ್ಲಿ ಸುಪ್ರೀಂ ಆದೇಶ ಮಾಡಿತು. ಆ ಆದೇಶದ ಪ್ರಕಾರ ನಿಖರ ಡಾಟಾ ಇರಬೇಕು. ಅಸಮರ್ಥರನ್ನು ಪ್ರಾಬಲ್ಯ ಇದ್ದವರ ಜೊತೆ ಸೇರಿಸಬಾರದು ಎಂದು ಹೇಳಿತು. ಅದರ ಆಧಾರದಲ್ಲಿ ರಾಜ್ಯ ಸರ್ಕಾರ ನ್ಯಾ. ನಾಗಮೋಹನದಾಸ್ ಸಮಿತಿ ರಚನೆ ಮಾಡಿದ್ದರು. ಅವರು ಸಮೀಕ್ಷೆ ಮಾಡಿ ವರದಿ ಕೊಟ್ಟರು. ಸರ್ಕಾರ ನ್ಯಾ. ನಾಗಮೋಹನ ದಾಸ್ ವರದಿ, ನ್ಯಾ. ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ವರದಿ ಎಲ್ಲವನ್ನು ಕೈ ಬಿಟ್ಟು, ಎಸ್ಸಿ ಪ್ರವರ್ಗ ಎ, ಶೇ 6, ಎಸ್ಸಿ ಪ್ರವರ್ಗ ಬಿ ಶೇ 6 ಹಾಗೂ ಎಸ್ಸಿ ಪ್ರವರ್ಗ ಸಿ ಶೇ 5 ಮೀಸಲಾತಿ ವರ್ಗಿಕರಿಸಿ ರಾಜಕೀಯ ನಿರ್ಣಯ ಮಾಡಿದ್ದಾರೆ. ಇದಕ್ಕೆ ಆಯೋಗ ಮಾಡುವ ಅಗತ್ಯವೇನಿತ್ತು. ಅಲೆಮಾರಿಗಳಿಗೆ ಶೇ 1% ಮೀಸಲಾತಿ ಕೊಡಬೇಕೆಂದು ಮಾಧುಸ್ವಾಮಿ ಹಾಗೂ ನಾಗಮೋಹನ ದಾಸ್ ವರದಿಯಲ್ಲಿ ತಿಳಿಸಿದ್ದರು. ಇವರು ಕೇವಲ ಮತ ಬ್ಯಾಂಕಿನ ಸುರಕ್ಷತೆಗಾಗಿ ಈ ತಿರ್ಮಾನ ಮಾಡಿದ್ದಾರೆ. ಇದರಿಂದ ಸುಪ್ರೀಂ ಕೋರ್ಟ್ ನ ಆದೇಶ ಪಾಲಿಸದೆ ಸಾಮಾಜಿಕ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ವರ್ಗೀಕರಣ ಮಾಡಲಿಲ್ಲ. ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ ಅಂತ ಇತ್ತು ಅದನ್ನು ಇವರು ತಿರಸ್ಕರಿಸಿದರು. ಎಕೆ, ಎಡಿ, ಎಎ ಯಾವುದೇ ಗುಂಪಿಗೆ ಸೇರಲಿಲ್ಲ. ಅವರು ಪ್ರವರ್ಗ ಎ, ಪ್ರವರ್ಗ ಬಿ, ದಲ್ಲಿ ಸೇರಿ ಅಂತ ಹೇಳಿ ಅವರನ್ನು ಎಲ್ಲಿಯೂ ಸೇರದಂತೆ ಮಾಡಿದರು. ಅಲೆಮಾರಿಗಳು ಅತ್ಯಂತ ಕನಿಷ್ಠ ಜೀವನ ಸ್ಥಿತಿಯಲ್ಲಿದ್ದಾರೆ. ಅವರಿಗೆ ಯಾವುದೇ ಮೀಸಲಾತಿ ಇಲ್ಲ. ರಾಜ್ಯ ಸರ್ಕಾರದ ಒಳ ಮೀಸಲಾತಿಯಿಂದ ಯಾರೂ ಸಂತುಷ್ಠರಿಲ್ಲ. ಎಸ್ಸಿ ಬಲಗೈ ಸಮುದಾಯದವರು ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ್ದಾರೆ. ಲಂಬಾಣಿ ಬೊವಿ ಜೊತೆಗೆ 59 ಜಾತಿಗಳನ್ನು ಸೇರಿಸಿದ್ದಾರೆ. ಸರ್ಕಾರದ ಬಳಿ ಹೋದರೆ ನಾವು ರಾಜಕೀಯ ನಿರ್ಣಯ ಕೈಗೊಂಡಿದ್ದೇವೆ ನೀವು ಬೇಕಾದರೆ ಕೋರ್ಟ್ ಗೆ ಹೋಗಿ ಅಂತ ಹೇಳುತ್ತಿದ್ದಾರೆ. ಮತ್ತೆ ಬಗೆಹರಿಯದ ಕಗ್ಗಂಟಾಗಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಅನುಭವಿಗಳಿದ್ದಾರೆ. ಆ ಸಮುದಾಯಗಳಿಗೆ ನ್ಯಾಯ ಕೊಡಿ, ನಾವು ಮೀಸಲಾತಿ ಹೆಚ್ಚಳ ಮಾಡಿದ್ದಾಗ ಅದನ್ನು ವಿರೋಧಿಸಿದ್ದೀರಿ, ಈಗ ಅದೇ ಆಧಾರದಲ್ಲಿ ಒಳ ಮೀಸಲಾತಿ ನೀಡಿದ್ದೀರಿ, ಈಗ ಆ ಜನರ ಕ್ಷಮೆ ಕೇಳುತ್ತೀರಾ ? ಇಲ್ಲವೇ ಇನ್ನೊಂದು ಪರ್ಸೆಂಟ್ ಹೆಚ್ಚಳ ಮಾಡಿ ಅವರಿಗೆ ನ್ಯಾಯ ಕೊಡಿಸುತ್ತೀರಾ. ಅವರಿಗೆ ಪ್ಯಾಕೆಜ್ ಕೊಡುವ ಬಗ್ಗೆ ಮಾತನಾಡುತ್ತಾರೆ. ಇದೇನು ವ್ಯವಹಾರಿಕ ಡೀಲಾ ಆ ಸಮುದಾಯಗಳಿಗೆ ಶಾಶ್ವತ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಮುಂದೆ ಬಿಜೆಪಿಯ ಬೇಡಿಕೆ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಬೇಡಿಕೆ ನಾಗಮೋಹನ ದಾಸ್ ವರದಿ ಒಪ್ಪಿಕೊಳ್ಳಬೇಕು. ಇನ್ನೊಂದು ಪರ್ಸೆಂಟ್ ಹೆಚ್ಚಳ ಮಾಡಿ ಅಲೆಮಾರಿಗಳಿಗೆ ನೀಡಿ, ಬೋವಿ, ಲಂಬಾಣಿಯವರಿಗೆ ನೀಡಿರುವ ಮೀಸಲಾತಿ ಇನ್ನೊಮ್ಮೆ ಪರಿಷ್ಕರಿಸಿ, ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡಬೇಕು. ಶಿಕ್ಷಣ ನೇಮಕಾತಿ ಹಾಗೂ ಭಡ್ತಿಯಲ್ಲಿ ಎಲ್ಲದರಲ್ಲೂ ಒಳ ಮೀಸಲಾತಿ ಪಾಲನೆಯಾಗಬೇಕು. ನಾವು ಬಿಜೆಪಿಯಿಂದ ಎಲ್ಲ ಸಮುದಾಯಗಳ ಜೊತೆಗೆ ನಿಲ್ಲುತ್ತೇವೆ. ಅವರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇವೆ. ಸರ್ಕಾರದ ಮಟ್ಟದಲ್ಲಿ ಬಗೆ ಹರಿಸಲು ಅವಕಾಶ ಇದೆ. ಅದನ್ನು ಬಗೆ ಹರಿಸದಿದ್ದರೆ ಕಾನೂನು ಹೋರಾಟವನ್ನೂ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa