ಬೆಂಗಳೂರು, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಧರ್ಮಸ್ಥಳ ಬುರುಡೆ ಪ್ರಕರಣದ ಹಿನ್ನೆಲೆಯಲ್ಲಿ ತಮಿಳುನಾಡಿನ ಕಾಂಗ್ರೆಸ್ ಸಂಸದ ಹಾಗೂ ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ವಿರುದ್ಧ ಶಾಸಕ ಜನಾರ್ದನ್ ರೆಡ್ಡಿ ಮಾಡಿದ್ದ ಗಂಭೀರ ಆರೋಪ ಇದೀಗ ನ್ಯಾಯಾಲಯದ ಮೇಟ್ಟಿಲೇರಿದೆ.
ರೆಡ್ಡಿ ನೀಡಿದ ಹೇಳಿಕೆಗಳಿಂದ ತಮ್ಮ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಸೆಂಥಿಲ್, ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಸೆಪ್ಟೆಂಬರ್ 11ರಂದು 42ನೇ ಎಸಿಎಂಎಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.
ದೂರು ದಾಖಲಿಸಿ ನಂತರ ಮಾಧ್ಯಮಗಳಿಗೆ ಮಾತನಾಡಿದ ಸಂಸದ ಸೆಂಥಿಲ್, ಬುರುಡೆ ಪ್ರಕರಣದಲ್ಲಿ ನನ್ನ ಹೆಸರನ್ನು ಎಳೆದು ತಂದಿದ್ದಾರೆ. ಇದು ಹೀಗೆ ಬಿಟ್ಟರೆ ಸುಳ್ಳು ಕಥೆ ನಿರ್ಮಾಣವಾಗುತ್ತದೆ. ರೆಡ್ಡಿ ನ್ಯಾಯಾಲಯದಲ್ಲಿ ಉತ್ತರ ನೀಡಲಿ ಎಂದರು.
ನನ್ನ ವ್ಯಕ್ತಿತ್ವ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಾನು ಬಲ ಪಂಥೀಯ ರಾಜಕಾರಣದ ವಿರುದ್ಧ ಹೋರಾಡಿದ್ದೇನೆ. ಅದಕ್ಕಾಗಿ ನನ್ನನ್ನು ಗುರಿ ಮಾಡಲಾಗಿದೆ, ಕರ್ನಾಟಕದ ಸಂಪತ್ತು ಲೂಟಿ ಮಾಡಿದ ವ್ಯಕ್ತಿ, ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಧಾರ್ಮಿಕ ವಿಚಾರವನ್ನು ರಾಜಕೀಯವಾಗಿ ದುರುಪಯೋಗ ಮಾಡಲಾಗುತ್ತಿದೆ. ಕರ್ನಾಟಕದ ಜನ ಬುದ್ದಿವಂತರು, ಅವರಿಗೆ ಎಲ್ಲವೂ ಗೊತ್ತಿದೆ ಎಂದು ಸೆಂಥಿಲ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa