ಬಳ್ಳಾರಿ, 03 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 2023-24 ಸಾಲಿನ 13ನೇ ಘಟಿಕೋತ್ಸವವು ಸೆಪ್ಟಂಬರ್ 4ರ ಗುರುವಾರ ನಡೆಯಲಿದ್ದು ಮೂವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದೆ.
ಗೌರವ ಡಾಕ್ಟರೇಟ್ ಪಡೆಯುತ್ತಿರುವವವರ ಪರಿಚಯ
1. ಇರ್ಫಾನ್ ರಜಾಕ್ : ಶ್ರೀಯುತರು ಮೂಲತಃ ಬೆಂಗಳೂರಿನವರು. ಪ್ರತಿಷ್ಠಿತ ಪ್ರೆಸ್ಟೀಜ್ ಗ್ರೂಪ್‍ನ ಗೌರವ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ತಮ್ಮ ಉದ್ಯಮಶೀಲತೆ ಹಾಗೂ ಸಮಾಜಮುಖಿ ಸೇವೆಗಾಗಿ ಖ್ಯಾತಿ ಪಡೆದಿದ್ದಾರೆ. ನಾಲ್ಕು ದಶಕಗಳ ವಾಣಿಜ್ಯ, ವ್ಯಾಪಾರ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಯಶಸ್ವಿಯಾಗಿ ಹೂಡಿಕೆ ನಡೆಸಿ ನಾಡಿನ ಖ್ಯಾತ ಉದ್ಯಮಿಗಳಾಗಿ ಮುನ್ನಡೆದಿದ್ದಾರೆ. ಸತತವಾದ ಅಭಿವೃದ್ಧಿ, ಸಾಮಾಜಿಕ ಹೊಣೆಗಾರಿಕೆ, ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಅನೇಕ ಜನೋಪಕಾರಿ ಕಾರ್ಯಕ್ರಮಗಳನ್ನು ತಮ್ಮ ಸಂಸ್ಥೆಯ ಮೂಲಕ ಕೈಗೊಂಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಾಗೂ ಎಂಟ್ರಪ್ರುನರ್ ಆಫ್ ದಿ ಇಯರ್ ಸೇರಿದಂತೆ ಅನೇಕ ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶ್ರೀಯುತರು ರಾಯಲ್ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ ಸರ್ವೇಯರ್ ನ ಫೆಲೊ ಆಗಿ 2013ರಿಂದ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದಿದ್ದಾರೆ.
2. ಡಾ. ವಸಂಧರಾ ಭೂಪತಿ :
ಡಾ. ವಸಂಧರಾ ಭೂಪತಿ ರವರು ಜೂನ್ 5, 1962 ರಂದು ರಾಯಚೂರಿನಲ್ಲಿ ಜನಿಸಿದರು. ತಮ್ಮ ವಿಶಿಷ್ಟ ವೈದ್ಯಕೀಯ ಸೇವೆ, ಸಾಹಿತ್ಯ, ಸಮಾಜಸೇವೆ ಮತ್ತು ಪತ್ರಿಕಾ ಅಂಕಣಕಾರರಾಗಿ ಗುರುತಿಸಿಕೊಂಡಿದ್ದಾರೆ.
ಆರೋಗ್ಯ ಶಿಬಿರ, ವೈದ್ಯಕೀಯ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅಪಾರ ಸಾಧನೆಗೈದಿದ್ದಾರೆ. ಆರೋಗ್ಯ ಸಂಗತಿ, ಮನೆಯಂಗಳದಲ್ಲಿ ಔಷಧಿವನ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
65ಕ್ಕೂ ಹೆಚ್ಚು ಆರೋಗ್ಯ ಕೃತಿಗಳು ಇಂಗ್ಲೀಷ್ ಮತ್ತು ಹಿಂದಿ ಭಾಷೆಗೆ ಅನುವಾದಗೊಂಡಿವೆ. ಸಾರ್ವಜನಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಶ್ರೀಯುತರು ಅಪಾರ ಸೇವೆ ಸಲ್ಲಿಸಿದ್ದಾರೆ.
ಅಂರತಾಷ್ಟ್ರೀಯ ಮಟ್ಟದಲ್ಲಿ ನಾಡಿನ ಹೆಸರನ್ನು ಪಸರಿಸಿದ್ದಾರೆ. ಇವರ ಸೇವೆಗೆ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅವರ ಮುಡಿಗೇರಿವೆ. ವೈದ್ಯಕೀಯ, ಸಾಹಿತ್ಯ, ಮಹಿಳಾ ಸಬಲೀಕರಣ, ಮತ್ತು ಸಾಮಾಜಿಕ ಸೇವೆಗಳಿಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ.
3. ಬಾವಿಹಳ್ಳಿ ನಾಗನಗೌಡ:
ಗಣಿನಾಡಿನ ಪ್ರಸಿದ್ಧ ಉದ್ಯಮಿಯಾಗಿರುವ ಶ್ರೀಯುತರು ಜೂನ್ 1, 1961ರಲ್ಲಿ ಜನಿಸಿದರು. ಬಿಕೆಜಿ ಫೌಂಡೇಶನ್ ಮೂಲಕ ಶಿಕ್ಷಣ ಅಭಿವೃದ್ಧಿ, ಸಾಮಾಜಿಕ ಸೇವೆ ಮತ್ತು ಸಾಹಿತ್ಯ-ಸಾಂಸ್ಕøತಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆರೋಗ್ಯ ಶಿಬಿರಗಳ ಮೂಲಕ ಕ್ಷಯರೋಗಿಗಳ ಚಿಕಿತ್ಸೆಗೆ ಶ್ರಮಿಸಿದ್ದಾರೆ. ಸಮಾಜಮುಖಿ ಕೆಲಸಗಳ ಮೂಲಕ ಸಮುದಾಯಕ್ಕೆ, ದೇವಸ್ಥಾನಗಳ ಜೀರ್ಣೋದ್ದಾರಕ್ಕೆ, ಮೂಲಭೂತ ಸೌಕರ್ಯಗಳ ಕಲ್ಪಿಸಲು ಕೊಡುಗೆ ನೀಡಿದ್ದಾರೆ. ಇವರ ಕಾರ್ಯಗಳಿಗೆ ಕನ್ನಡ ಶ್ರೀ ಮತ್ತು ಸೇವಾರತ್ನ ಪ್ರಶಸ್ತಿಗಳು ಒಲಿದು ಬಂದಿವೆ. ತಾಲೂಕ ಕನ್ನಡ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್