ಬಳ್ಳಾರಿ, 03 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 2023-24 ಸಾಲಿನ 13ನೇ ಘಟಿಕೋತ್ಸವವು ಸೆಪ್ಟಂಬರ್ 4ರ ಗುರುವಾರ ನಡೆಯಲಿದೆ.
ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ. ಮುನಿರಾಜು ಅವರು ಪತ್ರಕರ್ತರಿಗೆ ಬುಧವಾರ ಈ ಮಾಹಿತಿ ನೀಡಿದ್ದು, ಸೆಪ್ಟೆಂಬರ್ 4 ರ ಗುರುವಾರ ಮುಂಜಾನೆ 11 ಗಂಟೆಗೆ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಆವರಣದಲ್ಲಿ ಘಟಿಕೋತ್ಸವ ನಡೆಯಲಿದೆ. ಪ್ರಿಸ್ಟೇಜ್ ಗ್ರೂಪ್‍ನ ಅಧ್ಯಕ್ಷರಾಗಿರುವ ಇರ್ಫಾನ್ ರಜಾಕ್, ಲೇಖಕಿ, ವೈದ್ಯೆ ಮತ್ತು ಮಾಜಿ ಶಾಸಕ ಭೂಪತಿ ಅವರ ಪತ್ನಿ ಡಾ. ವಸುಂಧರಾ ಭೂಪತಿ ಹಾಗೂ ಸಮಾಜ ಸೇವಕ, ಸಂಡೂರಿನ ಗಣಿ ಉದ್ಯಮಿ ಬಾವಿಹಳ್ಳಿ ನಾಗನಗೌಡ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ ಎಂದರು.
ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ನವದೆಹಲಿಯ ಇಂಟರ್ ಯುನಿವರ್ಸಿಟಿ ಎಕ್ಸಲರೇಟರ್ ಸೆಂಟರ್‍ನ ನಿರ್ದೇಶಕರಾದ ಪ್ರೊ. ಅವಿನಾಶ್ ಚಂದ್ರ ಪಾಂಡೆ ಅವರು ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ. ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರಾಗಿರುವ ಡಾ. ಎಂ.ಸಿ. ಸುಧಾಕರ್ ಅವರು ಉಪಸ್ಥಿತರಿರಲಿದ್ದಾರೆ ಎಂದರು.
ಈ ಬಾರಿಯ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳಿಗೆ 51 ಚಿನ್ನದ ಪದಕಗಳನ್ನು ಮತ್ತು ವಿವಿಧ ವಿಭಾಗಗಳ ಒಟ್ಟು 57 ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಪದವಿ ನೀಡಲಾಗುತ್ತದೆ. ಎಲ್ಲಾ ವಿಭಾಗಗಳ ಸ್ನಾತಕ ಪದವಿಯ 80 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 75 ಒಟ್ಟು 155 ವಿದ್ಯಾರ್ಥಿಗಳಿಗೆ ರ್ಯಾಂಕ್ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಗುತ್ತದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್