ನವದೆಹಲಿ, 03 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಔಷಧ ಮತ್ತು ಕ್ಲಿನಿಕಲ್ ಸಂಶೋಧನಾ ವಲಯದಲ್ಲಿ ನಿಯಂತ್ರಕ ಅನುಸರಣೆ ಸುಲಭವಾಗಿಸಲು ಹಾಗೂ ವ್ಯವಹಾರಕ್ಕೆ ಅನುಕೂಲ ಮಾಡಿಕೊಡಲು, ಕೇಂದ್ರ ಆರೋಗ್ಯ ಸಚಿವಾಲಯವು ಹೊಸ ಔಷಧಗಳು ಮತ್ತು ಕ್ಲಿನಿಕಲ್ ಪ್ರಯೋಗ ನಿಯಮಗಳು, 2019ರಲ್ಲಿ ತಿದ್ದುಪಡಿ ತರಲು ಮುಂದಾಗಿದೆ.
ಈ ಕುರಿತು ಆಗಸ್ಟ್ 28, 2025ರಂದು ಭಾರತದ ಗೆಜೆಟ್‌ನಲ್ಲಿ ಪ್ರಕಟಿತ ಪ್ರಸ್ತಾವಿತ ತಿದ್ದುಪಡಿಗಳ ಕುರಿತು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ.
ಪ್ರಮುಖ ತಿದ್ದುಪಡಿಗಳು:
ಅರ್ಜಿದಾರರು ಇನ್ನು ಮುಂದೆ (ಕೆಲವು ಹೆಚ್ಚಿನ ಅಪಾಯದ ವರ್ಗದ ಔಷಧಿಗಳನ್ನು ಹೊರತುಪಡಿಸಿ) ಪರೀಕ್ಷಾ ಪರವಾನಗಿ ಪಡೆಯಬೇಕಾಗಿಲ್ಲ ಕೇವಲ ಕೇಂದ್ರ ಪರವಾನಗಿ ಪ್ರಾಧಿಕಾರಕ್ಕೆ ಮಾಹಿತಿ ನೀಡಿದರೆ ಸಾಕು.
ಪರೀಕ್ಷಾ ಪರವಾನಗಿ ಅರ್ಜಿಯ ಶಾಸನಬದ್ಧ ಅವಧಿ 90 ದಿನಗಳಿಂದ 45 ದಿನಗಳಿಗೆ ಇಳಿಸಲಾಗಿದೆ.
ಜೈವಿಕ ಲಭ್ಯತೆ/ಜೈವಿಕ ಸಮಾನತೆ ಅಧ್ಯಯನಗಳಿಗೆ ಸಂಬಂಧಿಸಿದ ಕೆಲ ವರ್ಗಗಳಿಗೆ ಇರುವ ಪರವಾನಗಿ ಅವಶ್ಯಕತೆಗಳನ್ನು ರದ್ದುಗೊಳಿಸಲಾಗಿದೆ.
ಇಂತಹ ಸಂದರ್ಭಗಳಲ್ಲಿ ಕೇವಲ ಮಾಹಿತಿ ಅಥವಾ ದಾಖಲೆ ಸಲ್ಲಿಕೆಯ ಪ್ರಕ್ರಿಯೆ ಅನುಸರಿಸಲಾಗುತ್ತದೆ.
ಕೇಂದ್ರ ಆರೋಗ್ಯ ಸಚಿವಾಲಯ, ಈ ನಿಯಂತ್ರಕ ಸುಧಾರಣೆಗಳು ಪಾಲುದಾರರಿಗೆ ಹೆಚ್ಚಿನ ಪ್ರಯೋಜನ ನೀಡಲಿದ್ದು, ದೇಶದಲ್ಲಿ ಔಷಧ ಸಂಶೋಧನೆ ಮತ್ತು ಅಭಿವೃದ್ಧಿ ವೇಗವನ್ನು ಉತ್ತೇಜಿಸಲಿವೆ ಎಂದು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa