ಮಂಡ್ಯ, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕದ ಮಂಡ್ಯ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾವೇರಿ ಆರತಿಗೆ ಇಂದು ಚಾಲನೆ ದೊರೆಯಲಿದೆ.
ಕೆಆರ್‌ಎಸ್ ದೋಣಿ ವಿಹಾರ ಕೇಂದ್ರದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾವೇರಿ ನದಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟನೆ ನೆರವೇರಿಸಲಿದ್ದಾರೆ.
ಈ ವೇಳೆ ತರಬೇತಿ ಪಡೆದ ಸ್ಥಳೀಯ ಪುರೋಹಿತರು ಗಂಗಾ ಆರತಿ ಶೈಲಿಯಲ್ಲಿ ಕಾವೇರಿ ಆರತಿಯನ್ನು ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ವೈಭವ ಕಣ್ತುಂಬಿಕೊಳ್ಳಲು ರಾಜ್ಯದ ವಿಭಿನ್ನ ಭಾಗಗಳಿಂದಲೂ, ಹೊರ ರಾಜ್ಯಗಳಿಂದಲೂ 8 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಪ್ರವಾಸಿಗರ ಅನುಕೂಲಕ್ಕಾಗಿ ಆಸನ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರಿಗೂ ಪ್ರಸಾದವಾಗಿ ಲಾಡು ವಿತರಿಸುವ ವ್ಯವಸ್ಥೆ ಮಾಡಲಾಗಿದೆ.
ಪ್ರವಾಸಿಗರ ಆಕರ್ಷಣೆಯನ್ನು ಹೆಚ್ಚಿಸುವ ಉದ್ದೇಶದಿಂದ, ಐದು ದಿನಗಳ ಕಾಲ ಕೆಆರ್‌ಎಸ್ ಬೃಂದಾವನಕ್ಕೆ ಉಚಿತ ಪ್ರವೇಶ ನೀಡಲಾಗಿದ್ದು, ವಾಹನಗಳ ಟೋಲ್ ಸಂಗ್ರಹವನ್ನೂ ರದ್ದುಪಡಿಸಲಾಗಿದೆ. ಇದರ ಪರಿಣಾಮವಾಗಿ ಕೆಆರ್‌ಎಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನಸಾಗರ ಹರಿದುಬರುವ ಸಾಧ್ಯತೆ ಇದೆ.
ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಪ್ರತಿಬಿಂಬಿಸುವ ಈ ವಿಶೇಷ ಕಾರ್ಯಕ್ರಮವು, ಗಂಗಾ ಆರತಿಯಂತೆಯೇ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾವೇರಿ ನದಿಯ ತೀರವನ್ನು ದೇಶದಾದ್ಯಂತ ಪರಿಚಯಿಸುವ ಉದ್ದೇಶ ಹೊಂದಲಾಗಿದೆ
ಕಾವೇರಿ ಆರತಿ ಮುಂದಿನ 5 ದಿನಗಳ ಕಾಲ ಪ್ರತಿದಿನ ಸಂಜೆ ನಡೆಯಲಿದ್ದು, ಪ್ರಕೃತಿ, ಸಂಸ್ಕೃತಿ ಮತ್ತು ಭಕ್ತಿಯ ಸಂಗಮವನ್ನು ಜನತೆಗೆ ಕಣ್ತುಂಬಿಕೊಳ್ಳುವ ಅವಕಾಶ ಒದಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa