ಬಳ್ಳಾರಿ, 25 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ತಾಲ್ಲೂಕಿನ ಕಮ್ಮರಚೇಡು, ರೂಪನಗುಡಿ, ರಾಯಪುರ, ಎತ್ತಿನಬೂದಿಹಾಳ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಹತ್ತಿ ಬೆಳೆಯಲ್ಲಿ ತಂಬಾಕು ವೈರಸ್ ರೋಗದ ಲಕ್ಷಣ ಕಾಣಿಸಿಕೊಂಡಿರುವ ಬಗ್ಗೆ ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳ ತಂಡ ಬುಧವಾರ ಭೇಟಿ ನೀಡಿ ನಿರ್ವಹಣಾ ಕ್ರಮಗಳ ಕುರಿತು ರೈತರಲ್ಲಿ ಸಲಹೆ ಹಾಗೂ ಜಾಗೃತಿ ಮೂಡಿಸಿದ್ದಾರೆ.
ಹತ್ತಿ ಬೆಳೆಯಲ್ಲಿ ತಂಬಾಕು ವೈರಸ್ ರೋಗಕ್ಕೆ ತುತ್ತಾದ ಗಿಡಗಳಲ್ಲಿ ಹಳದಿ ಮಿಶ್ರಿತ ಮಚ್ಚೆಗಳು ಚಿಗುರೊಡೆದ ಎಲೆಗಳಲ್ಲಿ ಕಂಡು ಕಾಲಕ್ರಮೇಣ ನೇರಳೆ ಬಣ್ಣಕ್ಕೆ ತಿರುಗುತ್ತವೆ ಹಾಗೂ ರೋಗದ ತೀವ್ರತೆ ಹೆಚ್ಚಾದಾಗ ಚಿಗುರು ಎಲೆಯ ಅಂಚು ಸಹ ಒಣಗುತ್ತದೆ. ಇದರಿಂದ ಗಿಡಗಳ ಬೆಳವಣಿಗೆ ಕುಂಠಿತವಾಗಿ ಮೊಗ್ಗು ಮತ್ತು ಹೂವಿನ ಉತ್ಪಾದನೆ ಕಡಿಮೆಯಾಗುತ್ತದೆ. ರೋಗದ ತೀವ್ರತೆಯಿಂದ ಹತ್ತಿ ಕಾಯಿಗಳು ಸಹ ಒಣಗುತ್ತವೆ ಎಂದು ಐಸಿಎಆರ್ ಹಗರಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಪಾಲಯ್ಯ.ಪಿ ಅವರು ಹೇಳಿದರು.
ಈ ನಂಜಾಣು ರೋಗಕ್ಕೆ ಕಾರಣವಾದ ಥ್ರಿಪ್ಸ್ ನುಸಿ ಎನ್ನುವ ರಸ ಹೀರುವ ಕೀಟದಿಂದ ಇದು ಬೇರೆ ಸಸ್ಯಗಳಿಗೆ ಹರಡುತ್ತದೆ. ರೈತರು ರೋಗದ ಹತೋಟಿಗಾಗಿ ತಮ್ಮ ಜಮೀನಿನಲ್ಲಿ ರೋಗಕ್ಕೆ ತುತ್ತಾದ ಸೋಂಕಿತ ಸಸ್ಯಗಳನ್ನು ಹಾಗೂ ರೋಗಕ್ಕೆ ಮೂಲ ಕಾರಣವಾದ ಆಶ್ರಯ ಕೊಡುವ ಸಸಿಯಾದ ಪಾರ್ಥೇನಿಯಂ ಮತ್ತು ಇತರೆ ಕಳೆ ಜಾತಿಯ ಸಸ್ಯಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ತಮ್ಮ ಜಮೀನುಗಳನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಹಾಗೂ ರೋಗಕ್ಕೆ ತುತ್ತಾದ ಸಸ್ಯದ ಕುಡಿಯನ್ನು ಕಿತ್ತು ಹಾಕಬೇಕು ಎಂದು ತಿಳಿಸಿದರು.
ರೋಗದ ತೀವ್ರತೆ ಹೆಚ್ಚಾದಾಗ ಥ್ರಿಪ್ಸ್ ನುಸಿಯನ್ನು ನಿಯಂತ್ರಿಸಲು ಪ್ರತಿ ಎಕರೆಗೆ ಡೈನೋಟ್ಫುರಾನ್ 20% ಎಸ್‌ಜಿ 60 ಗ್ರಾಂ ಅಥವಾ ಫ್ಲೋನಿಕಾಮಿಡ್ 50% ಡಬ್ಲ್ಯೂಜಿ @ 60 ಗ್ರಾಂ ಅಥವಾ ಇಮಿಡಾಕ್ಲೋಪ್ರಿಡ್ 17.8% ಎಸ್‌ಎಲ್ 40-50 ಮಿ.ಲೀ ಸಿಂಪಡಿಸಬೇಕು ಎಂದು ರೈತರಲ್ಲಿ ಅರಿವು ಮೂಡಿಸಿದರು.
ಈ ವೇಳೆ ಹಿರಿಯ ವಿಜ್ಞಾನಿ ಡಾ.ರವಿ.ಎಸ್(ಮಣ್ಣು ವಿಜ್ಞಾನಿ) ಹಾಗೂ ಡಾ.ನವೀನ್ ಕುಮಾರ್.ಪಿ (ಕೃಷಿ ವಿಸ್ತರಣೆ) ಒಳಗೊಂಡ ವಿಜ್ಞಾನಿಗಳ ತಂಡ ಹಾಗೂ ರೈತರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್