ಬಳ್ಳಾರಿ, 25 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಪ್ರತಿ ತಿಂಗಳು 09 ಮತ್ತು 24ನೇ ತಾರೀಖಿನಂದು ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಗಂಡಾಂತರ ಗರ್ಭಿಣಿ ಮಹಿಳೆಯರ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದ್ದಾರೆ.
ಸಾಮಾನ್ಯವಾಗಿ 12 ವಾರದೊಳಗೆ ಗರ್ಭಿಣಿ ಎಂದು ತಿಳಿದ ದಿನವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸುವ ಮೂಲಕ ತಾಯಿ ಕಾರ್ಡ್ ಪಡೆಯಬೇಕು. ಪ್ರತಿ ತಿಂಗಳು ತೂಕ, ರಕ್ತದ ಪ್ರಮಾಣ ಹಾಗೂ ಇತರೆ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಇದರಿಂದ ಹೆರಿಗೆ ಸಮಯದಲ್ಲಿ ಅನಗತ್ಯ ಒತ್ತಡ ಉಂಟಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಪ್ರತಿ ತಿಂಗಳು 09ನೇ ತಾರೀಖಿನಂದು ಎಲ್ಲಾ ಗರ್ಭಿಣಿ ಸ್ತ್ರೀಯರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಗಂಡಾಂತರ ಗರ್ಭಿಣಿ ಮಹಿಳೆಯರು ಎಂದು ಗುರ್ತಿಸಿದ ನಂತರ ಅಂದರೆ ಚೊಚ್ಚಲ ಗರ್ಭಿಣಿ, ಎತ್ತರ ಕಡಿಮೆ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಕಬ್ಬಿಣಾಂಶ ಕೊರತೆ, ಅವಳಿ-ಜವಳಿ ಗರ್ಭಿಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವುದು, ಮೊದಲ ಹೆರಿಗೆ ಸಿಸೇರಿಯನ್ ಮುಂತಾದ ಕಾರಣಗಳಿದ್ದರೆ ನಿಲ್ರ್ಯಕ್ಷಿಸುವಂತಿಲ್ಲ ಎಂದು ಎಚ್ಚರಿಸಿದ್ದಾರೆ.
ತೀವ್ರ ರಕ್ತಹೀನತೆಯಂತಹ ಸನ್ನಿವೇಶದಲ್ಲಿ ಸ್ಥಳೀಯವಾಗಿ ನೀಡುವ ಚಿಕಿತ್ಸೆಯಾದ ಐಎಫ್‍ಎ ಮಾತ್ರೆ, ಐರನ್ ಸುಕ್ರೋಸ್, ರಕ್ತ ಹಾಕಿಸುವುದು ಮಾಡಬೇಕು. ಸುಧಾರಣೆಯಾಗದಿದ್ದಲ್ಲಿ ತಜ್ಞರ ಬಳಿ ತಪ್ಪದೇ ತೆರಳಬೇಕು. ಅಗತ್ಯವಿದ್ದಲ್ಲಿನ ಸ್ಕ್ಯಾನ್ ಮಾಡಿಸಬೇಕು. ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದೂಡಬೇಕು. ಇದಕ್ಕಾಗಿ ಅಂತರ ಚುಚ್ಚುಮದ್ದು, ಕಾಪರ-ಟಿ, ನೀರೊಧ ಸಹ ಬಳಸಬಹುದು ಎಂದಿದ್ದಾರೆ.
ವೈದ್ಯರು ಎಲ್ಲಾ ಗರ್ಭಿಣಿಯರ ತಾಯಿಕಾರ್ಡ್ ಪರಿಶೀಲಿಸಿ ಗೆಸ್ಟೋಸಿಸ್ ಸ್ಕೋರ್ ಬಗ್ಗೆ ಪರಿಶೀಲಿಸಿ, ತಾಯಿಕಾರ್ಡ್‍ನಲ್ಲಿ ಗರ್ಭಿಣಿಯ ಆರೋಗ್ಯ ತಪಾಸಣೆ ಮಾಹಿತಿ ಭರ್ತಿ ಮಾಡುವರು.
ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಜೊತೆಗೆ ವೈದ್ಯರ ಸಲಹೆಯಂತೆ ಉಚಿತವಾಗಿ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ ಒಂದರಂತೆ ಕನಿಷ್ಟ 180, ಒಂದು ವೇಳೆ ರಕ್ತಹೀನತೆಯ ಪ್ರಮಾಣ ತೀವ್ರವಾಗಿದ್ದಲ್ಲಿ ದಿನಕ್ಕೆ 2 ರಂತೆ 360 ಮಾತ್ರೆಗಳನ್ನು 6 ತಿಂಗಳ ಅವಧಿಯಲ್ಲಿ ಸೇವನೆ ಮಾಡಬೇಕು. ಇದರ ಜೊತೆಯಲ್ಲಿ ದೈಹಿಕವಾಗಿ ಸದೃಢರಾಗಿರಲು ಕ್ಯಾಲ್ಸಿಯಮ್ ಮಾತ್ರೆ ಸಹ ನುಂಗಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್