ವಿಜಯಪುರ, 25 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಧಾರ್ಮಿಕ ಇಲಾಖೆ ವ್ಯಾಪ್ತಿಯ ಐತಿಹಾಸಿಕ ದೇವಾಲಯಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ನಾನಾ ಕ್ಷೇತ್ರಗಳ ಗಣ್ಯರ ವಿಜನ್ ಗ್ರುಪ್ ರಚಿಸಲಾಗಿದ್ದು, ಸಮಿತಿಯ ಸದಸ್ಯರಾಗಿ ಡಾ. ಮಹಾಂತೇಶ ಬಿರಾದಾರ ಅವರನ್ನು ನೇಮಕ ಮಾಡಲಾಗಿದೆ. ಇವರು ಉತ್ತರ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿದ್ದಾರೆ.
ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಆಗಿರುವ ಡಾ. ಮಹಾಂತೇಶ ಬಿರಾದಾರ ಅವರನ್ನು ಏಳು ಜನ ಸದಸ್ಯರನ್ನು ಹೊಂದಿರುವ ವಿಜನ್ ಗ್ರುಪ್ ಸದಸ್ಯರನ್ನಾಗಿ ಧಾರ್ಮಿಕ ಇಲಾಖೆ ಆಯುಕ್ತರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ರಾಜ್ಯ ಧಾರ್ಮಿಕ ಪರಿಷತ್ ಸಭೆಯ ನಿರ್ದೇಶನದಂತೆ ಯಾವುದೇ ಆದಾಯವಿಲ್ಲದ 35165 'ಸಿ' ವರ್ಗದ ಐತಿಹಾಸಿಕ ದೇವಾಲಯಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಮಾಜದ ಗಣ್ಯರು ಮತ್ತು ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡವ ವಿಜನ್ ಗ್ರುಪ್ (Vision Group) ರಚಿಸಲಾಗಿದೆ.
ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 34563 ಅಧಿಸೂಚಿತ ದೇವಾಲಯಗಳಿವೆ ಇವುಗಳಲ್ಲಿ ಪ್ರವರ್ಗ “ಎ” ನಲ್ಲಿ 205 ಮತ್ತು ಪ್ರವರ್ಗ “ಬಿ” ನಲ್ಲಿ 193 ಹಾಗೂ ಪ್ರವರ್ಗ “ಸಿ” ನಲ್ಲಿ 34165 ದೇವಾಲಯಗಳಿವೆ. ಈ ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ದೇವಾಲಯದ ಆದಾಯವನ್ನು ಅವಲಂಭಿಸಬೇಕಾಗಿದೆ. ಅಗತ್ಯವಿರುವ ಸಂದರ್ಭಗಳಲ್ಲಿ ಸರ್ಕಾರದಿಂದ ಮತ್ತು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಪ್ರವರ್ಗ “ಸಿ” ದೇವಾಲಯಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ದೇವಾಲಯಗಳ ವಾಸ್ತವ ಸ್ಥಿತಿಗತಿಗಳನ್ನು ಪರಿಶೀಲಿಸಿ ಅವುಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳುವ ಸಲುವಾಗಿ ಸಮಾಜದ ನಾನಾ ಕ್ಷೇತ್ರಗಳ ಪ್ರಮುಖರನ್ನು ಒಳಗೊಂಡ ಒಂದು ವಿಜನ್ ಗ್ರುಪ್ ರಚಿಸಲಾಗಿದೆ.
ಈ ವಿಜನ್ ಗ್ರುಪ್ ಸಿ ವರ್ಗದ ದೇವಾಲಯಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಸಂದರ್ಭದಲ್ಲಿ ಅಗತ್ಯ ಸಲಹೆ ಮತ್ತು ಸೂಚನೆ ನೀಡಲಿದೆ. ದೇವಾಲಯಗಳಿಗೆ ಬರುವ ಭಕ್ತರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯವನ್ನು ಒದಗಿಸುವುದು, ದೇವಾಲಯದ ಪರಂಪರೆಗೆ ದಕ್ಕೆ ಬಾರದ ರೀತಿಯಲ್ಲಿ ದೇವಾಲಯದ ಆಡಳಿತಕ್ಕೆ ಅವಶ್ಯವಿರುವ ಸಲಹೆ ಸೂಚನೆಗಳನ್ನು ನೀಡಿ, ಕಾರ್ಯಗಳ ಮೇಲುಸ್ತುವಾರಿ ವಹಿಸಲಿದೆ. ಜೊತೆಗೆ ದಾನಿಗಳಿಂದ ಸಂಪನ್ಮೂಲ ಕ್ರೋಢೀಕರಿಸುವುದು, ಮಂದಿರಗಳ ಐತಿಹಾಸಿಕ ಹಿನ್ನೆಲೆ, ಪರಂಪರೆ ಪರಿಗಣಿಸಿ ಅವುಗಳ ಸಂರಕ್ಷಣೆ ಜೀರ್ಣೋದ್ಧಾರದ ರೂಪುರೇಷೆ ಸಿದ್ಧಪಡಿಸುವುದು ಹಾಗೂ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಕಾರ್ಯವನ್ನು ಈ ವಿಜನ್ ಗ್ರುಪ್ ಮಾಡಲಿದೆ.
ಈ ಗ್ರುಪ್ ನಲ್ಲಿ ಡಾ. ಮಹಾಂತೇಶ ಬಿರಾದಾರ ಸೇರಿದಂತೆ ಪ್ರೊ. ಕೆ. ಇ. ರಾಧಾಕೃಷ್ಣ, ರಾಜ್ಯಸಭೆ ಮಾಜಿ ಸದಸ್ಯ ಕೆ. ಸಿ. ರಾಮಮೂರ್ತಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಉಪಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ. ಶ್ರೀಪಾದ ಎಸ್. ಬಿ., ಶ್ರೀನಿವಾಸ ಪಿ. ಸಿ. ಹಾಗೂ ಯತಿರಾಜ ಸಂಪತ್ ಕುಮಾರನ್ ಎಸ್. ಎನ್. ಅವರು ಈ ವಿಜನ್ ಗ್ರುಪ್ ನಲ್ಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande