ವಿಜಯಪುರ, 25 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೂಡಲಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳಿಗೆ ರಾಜಕಾರಣ ಏಕೆ ಬೇಕು? ಕೋಟಿ ಕೋಟಿ ಮೌಲ್ಯದ ಕಾರು ಏಕೆ ಬೇಕು? ಬಂಗ್ಲೆ ಏಕೆ ಬೇಕು. ಈ ಸ್ವಾಮೀಜಿಗಳಿಂದಲೇ ಪಂಚಮಸಾಲಿ ಸಮಾಜ ಹಾಳಾಗಿದೆ ಎಂದು ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ದೂರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಡಲಸಂಗಮ ಪಂಚಮಸಾಲಿ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ರಾಜಕಾರಣಿಗಳ ಬೆನ್ನು ಹತ್ತಬಾರದು, ಸ್ವಲ್ಪದಿನ ಒಬ್ಬೊಬ್ಬ ನಾಯಕರನ್ನು ಬೆನ್ನು ಹತ್ತುವ ಈ ಸ್ವಾಮೀಜಿಗಳಿಂದಲೇ ಪಂಚಮಸಾಲಿ ಸಮಾಜ ಹಾಳಾಗಿದೆ ಎಂದು ದೂರಿದರು.
ಸ್ವಾಮೀಜಿಗಳು ತಾವು ಮಾಡಬೇಕಾದ ಕಾರ್ಯವನ್ನು ಮಾಡಬೇಕು ಹೊರತು ರಾಜಕಾರಣ ಮಾಡಬಾರದು, ರಾಜಕಾರಣಿಗಳ ಬೆನ್ನು ಹತ್ತಬಾರದು, ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ರಾಜಕಾರಣಿಗಳ ಬೆನ್ನು ಹತ್ತಿ ತಮ್ಮ ರೇಖೆ ದಾಟಿ ಹೊರಟಿದ್ದಾರೆ, ಮೊದಲು ಒಬ್ಬರಿಗೆ, ಈಗ ಇನ್ನೊಬ್ಬರಿಗೆ ಬೆಂಬಲ ನೀಡುತ್ತಿದ್ದಾರೆ, ಪಂಚಮಸಾಲಿ ಒಡೆಯಲು ಯಾರೂ ಬೇಡ ಇವರೇ ಸಾಕಾಗಿದ್ದಾರೆ ಎಂದರು.
ಈ ಹಿಂದೆ ಅವರಿಗೆ ವಿಜಯಾನಂದ ಕಾಶಪ್ಪನವರ ಬೇಕಿದ್ದರು, ಈಗ ಬೇಡವಾಗಿದ್ದಾರೆ, ಇದೇ ರೀತಿ ಹೋದರೆ ಸಮಾಜ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದರು. ಬಬಲೇಶ್ವರದ ಶ್ರೀ ಮಹಾದೇವ ಶಿವಾಚಾರ್ಯರು ಮಹಾನ್ ಚಿಂತಕರು, ವಿದ್ವಾಂಸರು, ಸಂಸ್ಕೃತ ಪಂಡಿತರು, ಅಂತಹ ಶ್ರೀಗಳ ನೇತೃತ್ವದಲ್ಲಿ ಸಮಾಜ ನಡೆಯಬೇಕು, ಆದರೆ ಅವರನ್ನು ಯಾರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ನೋವು ನನಗೆ ಕಾಡುತ್ತಿದೆ ಎಂದರು.
ಕೇವಲ ಪಂಚಮಸಾಲಿ ಒಂದೇ ಸಮಾಜವಲ್ಲ ಎಲ್ಲ ಸಮಾಜಗಳನ್ನು ನಾವು ಒಂದಾಗಿ ತೆಗೆದುಕೊಂಡು ಹೋಗಬೇಕು, ಪಂಚಸಾಲಿ ಸೇರಿದಂತೆ ಎಲ್ಲರೂ ನನಗೆ ಮತ ಹಾಕಿದ್ದಾರೆ, ಪಂಚಮಸಾಲಿ ಒಂದೇ ಮತದಿಂದ ಯಾರೂ ಆಯ್ಕೆಯಾಗಲು ಸಾಧ್ಯವಿಲ್ಲ, ನಾನು ಸೋತಿರಬಹುದು, ಆದರೆ ಜನರ ಮನಸ್ಸಿನಲ್ಲಿ ನಾನು ಸೋತಿಲ್ಲ, ಸರ್ಟಿಫಿಕೇಟ್ ಅಷ್ಟೇ ನನ್ನ ಕಡೆ ಇಲ್ಲ, ಆದರೂ ಜನರ ಮನಸ್ಸಿನಲ್ಲಿ ನಾನು ಗೆದ್ದಿರುವೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande