ವಿಜಯಪುರ, 25 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಶ್ವಾದ್ಯಂತ ಮೊಬೈಲ್ ಪ್ರೀಯರು ಹೊಸ ಮಾದರಿ ಐಫೋನ್ ಖರೀದಿಗೆ ನಾನಾ ಮಹಾನಗರಗಳಲ್ಲಿ ಸಾಲಿನಲ್ಲಿ ನಿಲುತ್ತಿದ್ದಾರೆ. ಇಂಥ ಐಫೋನ್ ತಯಾರಿಸುವ ಅಂತಾರಾಷ್ಟ್ರೀಯ ದೈತ್ಯ ಕಂಪನಿ ಫಾಕ್ಸ್ ಕಾನ್, ತನ್ನ ಕಂಪನಿಯಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಬಸವನಾಡು ವಿಜಯಪುರಕ್ಕೆ ಆಗಮಿಸುತ್ತಿರುವುದು ಗಮನ ಸೆಳೆದಿದೆ.
ಈ ಕಂಪನಿ ಬಿ.ಎಲ್.ಡಿ.ಇ ಸಂಸ್ಥೆ ಸಹಯೋಗದಲ್ಲಿ ನಗರದ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜನಿಯರಿಂಗ್ ಕಾಲೇಜಿನಲ್ಲಿ ಸೆಪ್ಟೆಂಬರ್ 26 ರಂದು ಶುಕ್ರವಾರ ಎಂಜನಿಯರಿಂಗ್ ಮತ್ತು ಡಿಪ್ಲೋಮಾ ಪಾಸಾದ ವಿದ್ಯಾರ್ಥಿಗಳಿಗಾಗಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದೆ.
2024 ಮತ್ತು 2025 ನೇ ಶೈಕ್ಷಣಿಕ ವರ್ಷದಲ್ಲಿ ಬಿ. ಇ ಮತ್ತು ಡಿಪ್ಲೋಮಾ ಕೋರ್ಸುಗಳಲ್ಲಿ ಮೆಕ್ಯಾನಿಕಲ್, ಇಲೇಕ್ಟ್ರಾನಿಕ್ಸ್ ಕಮ್ಯೂನಿಕೇಶನ್ ಮತ್ತು ಎಲೇಕ್ಟ್ರಾನಿಕ್ಸ್ ಎಲೆಕ್ಟ್ರೀಕಲ್ಸ್ ವಿಭಾಗಗಳಲ್ಲಿ ಉತ್ತೀರ್ಣರಾದ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಬಸವನಾಡು ವಿಜಯಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಕಷ್ಟು ಜನ ಪ್ರತಿಭಾವಂತ ಯುವಕರಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗತಿಕ ಕಂಪನಿಗಳು ವಿಜಯಪುರದಲ್ಲಿ ಉದ್ಯೋಗ ಮೇಳ ನಡೆಸುವಂತೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ.ಪಾಟೀಲ ಅವರು ಫಾಕ್ಸ್ ಕಾನ್ ಕಂಪನಿಗೆ ಉದ್ಯೋಗ ಮೇಳ ನಡೆಸುವಂತೆ ಕೋರಿದ್ದರು. ಅವರ ಕೋರಿಕೆಯಂತೆ ಸ್ಪಂದಿಸಿರುವ ಫಾಕ್ಸ್ ಕಾನ್ ಕಂಪನಿ ಅಧಿಕಾರಿಗಳು ಖುದ್ದು ವಿಜಯಪುರಕ್ಕೆ ಆಗಮಿಸಿ, ವಿದ್ಯಾರ್ಥಿಗಳ ಸಂದರ್ಶನ ನಡೆಸಿ, ನೇರ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಸೆಪ್ಟೆಂಬರ್ 26 ರಂದು ಶುಕ್ರವಾರ ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಈ ಉದ್ಯೋಗ ಮೇಳ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಎಂಜನಿಯರಿಂಗ್ ವಿದ್ಯಾರ್ಥಿಗಳು ಪ್ರಶಾಂತ ಪಾಟೀಲ- 9591345239 ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳು ಎಸ್. ವಿ. ಕುಲಕರ್ಣಿ 9449246255 ಇವರನ್ನು ಸಂಪರ್ಕಿಸಬೇಕು ಎಂದು ಕೈಗಾರಿಕಾ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande