ಬಳ್ಳಾರಿ, 23 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಕ್ಟೋಬರ್ 07 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್. ಕೆ ಅವರು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ಸೀಗೆ ಹುಣ್ಣಿಮೆ ದಿನದಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕುರಿತಂತೆ ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹನೀಯರ ಜೀವನ ಚರಿತ್ರೆ, ಸಮಾಜಕ್ಕೆ ನೀಡಿರುವ ಸಾಧನೆಯ ಕೊಡುಗೆಗಳ ಕುರಿತು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರ ಜಯಂತಿ ಕಾರ್ಯಕ್ರಮಗಳನ್ನು ಆಚರಿಸಲು ನಿರ್ದೇಶಿದೆ, ಹಾಗಾಗಿ ಜಯಂತಿ ಕಾರ್ಯಕ್ರಮಗಳ ಯಶಸ್ವಿಗೆ ಎಲ್ಲರ ಸಹಕಾರವೂ ಅಗತ್ಯವಿದೆ ಎಂದು ತಿಳಿಸಿದರು.
ಅ.07 ರಂದು ಬೆಳಿಗ್ಗೆ 09 ಗಂಟೆಗೆ ನಗರದ ವಾಲ್ಮೀಕಿ ವೃತ್ತದ ಬಳಿಯ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುತ್ತದೆ. ಸುತ್ತಲೂ ಸ್ವಚ್ಛತೆ, ಅಲಂಕಾರ ವ್ಯವಸ್ಥೆ ಕೈಗೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಳಿಕ ಶ್ರೀ ಕನಕದುರ್ಗಮ್ಮ ದೇವಸ್ಥಾನದಿಂದ ಮೆರವಣಿಗೆ ನಡೆಯಲಿದ್ದು, ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೆ ಬ್ರೂಸ್‌ಪೇಟೆ ಪೊಲೀಸ್ ಠಾಣೆ ಮುಂಭಾಗದಿ0ದ ತೇರು ಬೀದಿಯ ಮಾರ್ಗವಾಗಿ ಹೆಚ್.ಆರ್.ಗವಿಯಪ್ಪ ವೃತ್ತದಿಂದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮ0ದಿರ, ಬಳಿಕ ನಲ್ಲಚೇರುವು ಪ್ರದೇಶದ ವಾಲ್ಮೀಕಿ ಭವನದ ವೇದಿಕೆ ಕಾರ್ಯಕ್ರಮದವರೆಗೆ ನಡೆಯಲಿದ್ದು, ಸಂಚಾರ ಮಾರ್ಗಕ್ಕೆ ಅಡಚಣೆಯಾಗದಂತೆ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಮೆರವಣಿಗೆಯಲ್ಲಿ ರಾಮಾಯಣ ಕಥಾ ಸಂಗ್ರಹದ ವೇಷಧಾರಿಗಳು ಒಳಗೊಂಡ ಕಲಾ ತಂಡಗಳನ್ನು ನಿಯೋಜಿಸಲಾಗುವುದು. ವೇದಿಕೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಬೇಕು. ವಾಲ್ಮೀಕಿ ಅವರ ಕುರಿತು ಅಧ್ಯಯನ ಮಾಡಿರುವ ಸಂಪನ್ಮೂಲ ವ್ಯಕ್ತಿಯ ಉಪನ್ಯಾಸ ಆಯೋಜಿಸಬೇಕು. ಸಮಾಜದಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಗುವುದು. ಎಸ್.ಎಸ್.ಎಲ್.ಸಿ, ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳು ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ಎಂದರು.
ಕಾರ್ಯಕ್ರಮದ ಬಳಿಕ ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು ಎಂದರಲ್ಲದೇ, ಶಿಷ್ಠಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರನ್ನು ಆಹ್ವಾನಿಸಲಾಗುವುದು. ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿರಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಯಂತಿ ಆಚರಣೆಗೆ ಸಂಬ0ಧಿಸಿದ0ತೆ ಸಮಾಜದ ಮುಖಂಡರು ಸೂಕ್ತ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲೆಯ ಸಂಘ-ಸ0ಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್