ಬಳ್ಳಾರಿ, 23 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಭಾಗದ ಜನರ ಜೀವನಕ್ಕೆ ಶಕ್ತಿ ತುಂಬುವ ಯೋಜನೆಗಳಾಗಿವೆ ಎಂದು ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿ ಸಂಗನಕಲ್ಲು ಇವರ ಸಹಯೋಗದಲ್ಲಿ “ಗ್ಯಾರಂಟಿ ನಡೆ ಗ್ರಾಮ ಪಂಚಾಯತಿ ಕಡೆ” ಕಾರ್ಯಕ್ರಮದಡಿ ಬಳ್ಳಾರಿ ತಾಲ್ಲೂಕಿನ ಸಂಗನಕಲ್ಲು ಗ್ರಾಮದ ಗ್ರಾಪಂನಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ಮತ್ತು ಫಲಾನುಭವಿಗಳೊಂದಿಗೆ ಪಂಚ ಗ್ಯಾರಂಟಿ ಯೋಜನೆಗಳ ಕುಂದು-ಕೊರತೆಗಳ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಜನಸಾಮಾನ್ಯರಿಗೆ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಬೇಕು ಎಂಬ ಮಹಾದಾಸೆಯಾಗಿದ್ದು, ಅವರ ಆದೇಶದಂತೆ ಪ್ರತಿಯೊಂದು ಗ್ರಾಮದ ಗ್ರಾಪಂ ಮಟ್ಟದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವಲ್ಲಿ ಆಗುವ ಲೋಪದೋಷಗಳು ಹಾಗೂ ಈ ಯೋಜನೆಗಳಿಂದ ಹೊರಗುಳಿದ ಫಲಾನುಭವಿಗಳ ಕುರಿತು ಚರ್ಚಿಸಲು “ಗ್ಯಾರಂಟಿ ನಡೆ ಗ್ರಾಮ ಪಂಚಾಯತಿ ಕಡೆ” ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಸುಮಾರು 51 ಸಾವಿರ ಕೋಟಿ ಅನುದಾನ ಖರ್ಚು ಮಾಡಿದ್ದರೂ ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆ ಆಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಪ್ರತಿ ಪಕ್ಷಗಳು ನೀಡುವ ಟೀಕೆಗಳಿಗೆ ಕಿವಿಕೊಡದೇ ಇಂತಹ ಜನಪ್ರಿಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯವು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಬಸವಣ್ಣನವರ ಆದರ್ಶ ಪರಿಕಲ್ಪನೆಗಳನ್ನು ಅಳವಡಿಸಿಕೊಂಡು ಸರ್ಕಾರವು ಈ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರ ಕನಸುಗಳ ನನಸಾಗಿಸುವ ಶಕ್ತಿ ಯೋಜನೆ, ಬಡವರ ಕತ್ತಲೆಯ ಬದುಕು ಬೆಳಗಿದ ಗೃಹ ಜ್ಯೋತಿ ಯೋಜನೆ, ಬಡವರ ಹಸಿವು ನಿಗಿಸಿದ ಅನ್ನಭಾಗ್ಯ ಯೊಜನೆ, ಮನೆಯ ಯಾಜಮಾನಿಯ ಖರ್ಚು ವೆಚ್ಚಗಳಿಗೆ ಗೃಹಲಕ್ಷಿ ಯೋಜನೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕೆ ಯುವನಿಧಿ ಯೋಜನೆ. ಈ ಎಲ್ಲಾ ಯೋಜನೆಗಳು ಬಡವರ ಪಾಲಿಗೆ ಆಶಾಕಿರಣವಾಗಿವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷಿ ಯೋಜನೆಯ 3 ತಿಂಗಳ ಬಾಕಿ ಇದ್ದ ಹಣವನ್ನು ಶೀಷ್ರದಲ್ಲೇ ಬಿಡುಗಡೆಗೊಳಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಬಳ್ಳಾರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಗೋನಾಳ್ ನಾಗಭೂಷಣ ಗೌಡ ಅವರು ಮಾತನಾಡಿ, ಬಳ್ಳಾರಿ ತಾಲ್ಲೂಕಿನಲ್ಲಿ ಶಕ್ತಿ ಯೋಜನೆಯಡಿ 112.17 ಕೋಟಿ ರೂ., ಅನ್ನಭಾಗ್ಯ ಯೋಜನೆಯಡಿ 125.60 ಕೋಟಿ ರೂ., ಗೃಹಲಕ್ಷಿ ಯೋಜನೆಯಡಿ 481.33 ಕೋಟಿ ರೂ., ಗೃಹಜ್ಯೋತಿ ಯೋಜನೆಯಡಿ 175.5 ಕೋಟಿ ರೂ. ಮತ್ತು ಯುವನಿಧಿ ಯೋಜನೆಯಡಿ 7.23 ಕೋಟಿ ರೂ. ಅನುದಾನ ಪಾವತಿಸಲಾಗಿದೆ ಎಂದು ತಿಳಿಸಿದರು.
ಬಳ್ಳಾರಿ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ಮಾಡಿ ಗ್ಯಾರಂಟಿ ಯೋಜನೆಗಳ ಕುರಿತಾಗಿ ಅಲ್ಲಿಯ ಜನರ ದೂರು ಸ್ವೀಕರಿಸಿ, ಸ್ಥಳದಲ್ಲಿಯೇ ಸೂಕ್ತ ಪರಿಹಾರ ನೀಡಲು ಸರ್ಕಾರ ಮುತುವರ್ಜಿ ವಹಿಸಿದೆ. ಈ ಯೋಜನೆಗಳಡಿ ಕೇವಲ ಮಹಿಳೆಯರಷ್ಟೇ ಫಲಾನುಭವಿಗಳಾಗಿಲ್ಲ, ಪರೋಕ್ಷವಾಗಿ ಪುರುಷರು, ವಿದ್ಯಾರ್ಥಿಗಳು ಸಹ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಗಳಿಗೆ ಸಂಬAಧಿಸಿದAತೆ ಸಮಸ್ಯೆಗಳು, ತಾಂತ್ರಿಕ ದೋಷ ಮತ್ತು ಇನ್ನಿತರೆ ತೊಂದರೆಗಳಿದ್ದರೆ ನೇರವಾಗಿ ಸಂವಾದ ನಡೆಸಿ ಪರಿಹಾರ ಕಂಡುಕೊಳ್ಳಬಹುದು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನ ಪೀಠಿಕೆ ಬೋಧಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ವಿಜಯಕುಮಾರ್, ಗ್ರಾಪಂ ಅಧ್ಯಕ್ಷರಾದ ಗೋವಿಂದಮ್ಮ ನಾಗಿರೆಡ್ಡಿ, ಉಪಾಧ್ಯಕ್ಷರಾದ ಮಾರೆಕ್ಕ ಹನುಮಂತಪ್ಪ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವೆಂಕಟೇಶ್, ಕೆಕೆಆರ್‌ಟಿಸಿ ಸಾರಿಗೆ ಇಲಾಖೆಯ ಬಸವರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೋಹನ ಕುಮಾರಿ, ಆಹಾರ ಇಲಾಖೆಯ ಶರಣಯ್ಯ, ಜೆಸ್ಕಾಂನ ಕಾರ್ಯನಿವಾಹಕ ಅಭಿಯಂತರರಾದ ಮೋಹನಬಾಬು, ಸಂಗನಕಲ್ಲು ಗ್ರಾಪಂ ಅಭಿವೃದ್ಧಿ ಅಧಿಕಾರಿ ಆದಿಲಕ್ಷಿ, ಎಸ್‌ಡಿಎಂಸಿ ಅಧ್ಯಕ್ಷ ಲಕ್ಷಿಪತಿ, ಮುಖಂಡರಾದ ಅಲ್ಲಂ ಪ್ರಶಾಂತ್ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್