ಬಳ್ಳಾರಿ, 19 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವೀರಶೈವ ಜಂಗಮರು - ಭಕ್ತರು ಎಲ್ಲರೂ ಒಗ್ಗೂಡಿ ಸಮಾಜದಲ್ಲಿ ಒಂದಾಗಿ ಸಾಗಬೇಕಾಗಿದ್ದು ಭವಿಷ್ಯದಲ್ಲಿ ನಡೆಯುವ ಗಣತಿಗಲ್ಲಿ `ವೀರಶೈವ ಲಿಂಗಾಯಿತ' ಎಂದು ದಾಖಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ತಿಳಿಸಿದ್ದಾರೆ.
ಬಳ್ಳಾರಿಯ ರಾಘವಕಲಾ ಮಂದಿರದಲ್ಲಿ `ಭಾರತೀಯ ವೀರಶೈವ ಲಿಂಗಯತ ಜಂಗಮ ಪರಿಷತ್ತು'ನ್ನು ಉದ್ಘಾಟಿಸಿ, ಜಂಗಮರ ಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿದ ಅವರು, ಜಂಗಮರು - ವೀರಶೈವ ಲಿಂಗಾಯತರು ಎಲ್ಲರೂ ಒಂದಾಗಿ ಸಮಾಜದಲ್ಲಿ ಒಗ್ಗಟ್ಟನ್ನು ತರಬೇಕಿದೆ. ಗಣತಿಯಲ್ಲಿ `ವೀರಶೈವ ಲಿಂಗಾಯತ' ಮತ್ತು ಉಪಜಾತಿಯನ್ನು ದಾಖಲಿಸುವ ಮೂಲಕ ಸಮಾಜದಲ್ಲಿ ನಾವೆಲ್ಲರೂ ಒಂದೇ, ಎಂದೆಂದಿಗೂ ಒಂದೇ ಎನ್ನುವ ಐಕ್ಯತೆಯನ್ನು ಸಾರಬೇಕು ಎಂದರು.
ಭಕ್ತರು ಇಲ್ಲದಿದ್ದಲ್ಲಿ ಜಂಗಮರ ಅಸ್ತಿತ್ವವಿಲ್ಲ. ಹಾಗೆಯೇ ಭಕ್ತರಿಂದ ಜಂಗಮರು ಅನಿವಾರ್ಯ. ಜಂಗಮರು ಕೇವಲ ಭಾರತದಲ್ಲಿ ಮಾತ್ರ ಅಲ್ಲ, ವಿದೇಶಗಳಲ್ಲೂ ನೆಲೆಸಿದ್ದಾರೆ. ಈ ಸಂಘಟನೆಯು - ಜಂಗಮರ ಜಾಗೃತಿ ಮತ್ತು ಜಂಗಮರಲ್ಲಿ ಒಗ್ಗಟ್ಟು ಮೂಡಿಸಲು ಜಾಗತಿಕವಾಗಿ ಸಂಘಟನೆ ಆಗಬೇಕು ಎಂದು ಹೇಳಿದರು.
ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯ ಅವರು ಅತಿಥಿಗಳಾಗಿ, ಲಿಂಗಾಯತರು ಬೇರೆ, ವೀರಶೈವ ಲಿಂಗಾಯತರು ಬೇರೆ ಎನ್ನುವ ಭಾವನೆ ಸರಿಯಲ್ಲ. ಲಿಂಗಾಯತರಾಗಲಿ - ವೀರಶೈವರಾಗಲಿ ವೀಭೂತಿ ಧರಿಸಿ ಎಡಗೈಯಲ್ಲಿ ಶಿವಲಿಂಗವನ್ನು ಪೂಜಿಸುವ ಮಾರ್ಗ ಒಂದೇ. ಕಾರಣ ನಾವೆಲ್ಲರೂ ವೀರಶೈವ ಲಿಂಗಾಯತರಾಗಿ ಮುಂದುವರಿಯೋಣ. ಗಣತಿಯಲ್ಲಿ ವೀರಶೈವ ಲಿಂಗಾಯತರು ಎಂದು ಬರೆಯಿಸಿ ಉಪಜಾತಿಯನ್ನು ನಮೂದಿಸೋಣ ಎಂದರು.
ಹರಗಿನಡೋಣಿ ಪಂಚವಣಿಗಿ ಮಠದ ಷಟ್‍ಸ್ಥಳ ಬ್ರಹ್ಮಿ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು, `ವೀರಶೈವ ಲಿಂಗಾಯತ' ಒಂದೇ ಆಗಿದ್ದು `ಲಿಂಗಾಯತ' ಎಂದು ಬರೆಸಿದಲ್ಲಿ ಪ್ರತ್ಯೇಕ ಧರ್ಮ ಸಾಧ್ಯವಿಲ್ಲ. ರಾಜಕೀಯ ಷಡ್ಯಂತ್ರ ಮತ್ತು ಕುತಂತ್ರಗಳಿಗೆ ನಮ್ಮ ಸಮಾಜ ಬಲಿಯಾಗಬಾರದು. ಸಮಾಜದಲ್ಲಿ ಒಗ್ಗಟ್ಟು ಮುರಿದು, ಸಮಾಜ ಛಿದ್ರಛಿದ್ರವಾಗಬಾರದು. ಸಮಾಜದಲ್ಲಿ ಒಗ್ಗಟ್ಟು ಮೂಡಲಿಕ್ಕಾಗಿ ಪ್ರತಿಯೊಬ್ಬರೂ `ಹಿಂದೂ ವೀರಶೈವ ಲಿಂಗಾಯತ' ಎಂದು ಬರೆಸಿ ಉಪಜಾತಿಯನ್ನು ದಾಖಲಿಸಬೇಕು ಎಂದು ಆಶೀರ್ವಚನ ಮಾಡಿದರು.
ವೀರಶೈವ ಲಿಂಗಾಯಿತ ಮುಖಂಡ, ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಉಪಾಧ್ಯಕ್ಷರಾಗಿರುವ ಪಲ್ಲೇದ ಪಂಪಾಪತಿ ಅವರು, ಅತಿಥಿಗಳಾಗಿ, ಬಸವಣ್ಣನವರು 12ನೇ ಶತಮಾನದಲ್ಲಿ `ತಾವು ವೀರಶೈವರು' ಎಂದು ಒಪ್ಪಿರುವಾಗ `ಲಿಂಗಾಯತ' ವಿಚಾರದ ಚರ್ಚೆ ಅಪ್ರಸ್ತುತ ಎಂದರು.
ಭಾರತೀಯ ವೀರಶೈವ ಲಿಂಗಯತ ಜಂಗಮ ಪರಿಷತ್ತಿನ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ ಅವರು, ಭಾರತದಲ್ಲಿರುವ
ಜಂಗಮ ಸಮುದಾಯದ ಸಮಗ್ರ ಅಭಿವೃದ್ಧಿಯ ಜೊತೆಗೆ ವೀರಶೈವ ಲಿಂಗಾಯತ ಸಮುದಾಯದ ಐಕ್ಯತೆಗಾಗಿ ಶ್ರಮಿಸಲಿಕ್ಕಾಗಿಯೇ ಪರಿಷತ್ತನ್ನು ರಚಿಸಲಾಗಿದೆ. ಮುಂಬರುವ ಎಲ್ಲಾ ಗಣತಿಗಳಲ್ಲಿ ವೀರಶೈವ ಲಿಂಗಾಯಿತರು `ವೀರಶೈವ ಲಿಂಗಾಯಿತ'ದ ಜೊತೆಯಲ್ಲಿ ಜಂಗಮ ಅಥವಾ ಅವರವರ ಉಪ ಜಾತಿಗಳನ್ನು ನಮೂದಿಸಬೇಕು ಎಂದು ಕರೆ ನೀಡಿದರು.
ಈ ಸಭೆಯಲ್ಲಿ `ವೀರಶೈವ ಲಿಂಗಾಯತ' ಉಪ ಜಾತಿ `ಜಂಗಮ' ಎಂದು ನಮೂದಿಸಲು ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾ ಪರಿಷತ್ತಿನ ಮಾಜಿ ಸದಸ್ಯರು, ವಕೀಲರು ಆಗಿರುವ ಸಿರುಗುಪ್ಪದ ಎಚ್.ಕೆ. ಮಲ್ಲಿಕಾರ್ಜುನಯ್ಯ, ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷರೂ, ವಕೀಲರೂ ಆಗಿರುವ ಎಚ್.ಎಂ. ಗುರುಸಿದ್ಧಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಬಿ. ಪಂಚಾಕ್ಷರಿ, ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಅವರು ಅತಿಥಿಗಳಾಗಿ, `ಜಂಗಮರು' ಜಂಗಮ ಎಂದೇ ಗಣತಿಯಲ್ಲಿ ದಾಖಲಿಸಬೇಕು ಎಂದರು.
ಭಾರತೀಯ ವೀರಶೈವ ಲಿಂಗಯತ ಜಂಗಮ ಪರಿಷತ್ತಿನ ಪದಾಧಿಕಾರಿಗಳಾದ ವಿ.ಎಸ್. ಪ್ರಭಯ್ಯ, ವಕೀಲ ಸಿ.ಎಂ. ಗುರುಬಸವರಾಜ, ಕೆ.ಎಂ. ಕೊಟ್ರೇಶ್, ಎಚ್.ಕೆ. ಗೌರಿಶಂಕರ, ರುದ್ರಯ್ಯ, ಬಿ.ಎಂ. ಎರ್ರಿಸ್ವಾಮಿ, ಎಂ. ಚಂದ್ರಮೌಳಿ, ಬಂಡ್ರಾಳು ಮೃತ್ಯುಂಜಯ, ಎಚ್.ಎಂ. ಹಿಮಾಚಲ ಸೇರಿ ಅನೇಕರು ವೇದಿಕೆಯಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್