ರಾಯಚೂರು, 19 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಹೆಣ್ಣೇ ಜಾತಿ, ಹೆಣ್ಣೇ ಮತ, ಹೆಣ್ಣೇ ಧರ್ಮ. ನಾವೆಲ್ಲ ಡಾ.ಬಿ.ಆರ್.ಅಂಬೇಡ್ಕರ ಅವರ ಮಕ್ಕಳು, ಹೆಣ್ಣು ಮಕ್ಕಳಿಗೆ ಯಾವುದೇ ಜಾತಿ ಇಲ್ಲ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಪ್ರತಿಪಾದಿಸಿದ್ದಾರೆ.
ನಗರದ ಎಸ್‍ಎಸ್‍ಆರ್‍ಜಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೆÇಲೀಸ್ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಯು ಹಾಗೂ ಪದವಿ ವಿದ್ಯಾರ್ಥಿನಿಯರೊಂದಿಗಿನ ಸಂವಾದ ನಡೆಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನವನ್ನು ಎಚ್ಚರಿಕೆಯಿಂದ ಕಳೆಯಬೇಕು. ಸಾಮಾಜಿಕ ಜಾಲತಾಣಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಓದುವ ಸಮಯದಲ್ಲಿ ಪ್ರೀತಿ, ಪ್ರೇಮದ ಗೊಡವೆಗೆ ಹೋಗಬಾರದು. ತಪ್ಪು ಮಾಡುವುದು ಸಹಜ, ತಿದ್ದಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಮತ್ತೊಮ್ಮೆ ಅವಘಡ ಸಂಭವಿಸುವ ಮೊದಲೇ ತಪ್ಪನ್ನು ತಿದ್ದಿಕೊಳ್ಳಬೇಕು. ಗೊತ್ತಿಲ್ಲದವರ ಜೊತೆಗೆ ಮಾತನಾಡಬಾರದು, ಚಾಟ್ ಮಾಡಬಾರದು. ಬ್ಲಾಕ್ ಮೇಲ್ ಮಾಡುವವರು ಸಿಕ್ಕರೆ ನಮ್ಮ ಬದುಕು ಎಲ್ಲಿಗೆ ಹೋಗಿ ನಿಲ್ಲುತ್ತದೋ ತಿಳಿಯದು ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳು ಧೈರ್ಯದಿಂದ ಇರಬೇಕು. ಧೈರ್ಯದಿಂದ ಮಾತನಾಡಿದಾಗ ಮಾತ್ರ ಯಾವುದೇ ಸಮಸ್ಯೆಯನ್ನು, ಸವಾಲನ್ನು ಎದುರಿಸಲು ಸಾಧ್ಯವಾಗುತ್ತದೆ. ಏನಾದರು ತಪ್ಪುಗಳಾದಾಗ ಮನೆಯಲ್ಲಿ ಪಾಲಕರಿಗೆ ತಿಳಿಸಬೇಕು. ಬಳಿಕ ಪೊಲೀಸರ ಸಹಾಯ ಪಡೆಯಬೇಕು. ಸರ್ಕಾರ ನೀಡಿದ ಸಹಾಯವಾಣಿಗಳ ಬಳಕೆ ಮಾಡಬೇಕು ಎಂದು ಅವರು ಸಲಹೆ ಮಾಡಿದರು.
ಎಲ್ಲಿ, ಯಾವ ಕಡೆಯಲ್ಲಿ ಹೆಣ್ಣು ಮಕ್ಕಳು ಆರೋಗ್ಯ, ಶಿಕ್ಷಣ, ಆರ್ಥಿಕವಾಗಿ ಸಬಲರಾಗಿರುವುದಿಲ್ಲವೋ ಅದು ಅಭಿವೃದ್ಧಿಯಲ್ಲ. ಹೆಣ್ಣು ಮಕ್ಕಳು ಆರೋಗ್ಯದಿಂದಿದ್ದು, ಶಿಕ್ಷಣ ಪಡೆದು, ಆರ್ಥಿಕವಾಗಿ ಸಬಲರಾದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯವಾಗುತ್ತದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳುತ್ತಾರೆ. ಇಂತಹ ವಿಷಯಗಳ ಬಗ್ಗೆ ನಾವು ಮಹಿಳೆಯರು ಅರಿತು ಮುನ್ನಡೆಯಬೇಕು ಎಂದು ಅವರು ಸಲಹೆ ಮಾಡಿದರು.
ಭಾವುಕರಾದರು: ಕಾಲೇಜಿನಿಂದ ಊರಿಗೆ ಹೋಗಿ ಬರಲು ನಮ್ಮೂರಿಗೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲ. ಬಸ್ಸಿಲ್ಲದ ವೇಳೆ ನಾನು ನಡೆದುಕೊಂಡೇ ಬರುತ್ತೇನೆ ಎಂದು ವಿದ್ಯಾರ್ಥಿನಿಯೊಬ್ಬಳು ಸಂವಾದದಲ್ಲಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಮಾತಿನ ಮಧ್ಯೆ ‘ಯಾಕ್ರವ್ವ.. ನನ್ನ ಮಾತು ಕೇಳ್ರವ್ವ’ ಎಂದು ಹೇಳುತ್ತ ವಿದ್ಯಾರ್ಥಿನಿಯರೊಂದಿಗೆ ಆಪ್ತವಾಗಿ ಮಾತನಾಡುವ ವೇಳೆಯಲ್ಲಿ, ವಿದ್ಯಾರ್ಥಿನಿಯರ ಸಮಸ್ಯೆಯನ್ನು ಕೇಳಿ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಭಾವುಕರಾದರು.
ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿನಿಯರು: ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಪೂರ್ವನಿಗದಿಯಂತೆ ಬೆಳಗ್ಗೆ 11.10ರ ವೇಳೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಿರಂತರವಾಗಿ ಗಂಟೆಗೂ ಹೆಚ್ಚು ಕಾಲ ಸಂವಾದ ನಡೆಸಿದರು. ‘ನೀವು ಆರಾಮಾಗಿರಬೇಕವ್ವ.. ನಿಮಗೆ ಒಳ್ಳೆಯದಾಗಬೇಕವ್ವ’ ಎಂದು ಆಪ್ತವಾಗಿ ಮಾತನಾಡಿ, ಮಾತು ಮುಗಿಸುವ ಕೊನೆಯಲ್ಲಿ ವೇದಿಕೆಯಿಂದಲೇ ಸೆಲ್ಪೀ ಪಡೆದುಕೊಂಡರು. ಎಸ್‍ಎಸ್‍ಆರ್‍ಜಿ ಕಾಲೇಜಿನಿಂದ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು. ಇದೆ ವೇಳೆ ವಿದ್ಯಾರ್ಥಿನಿಯರು ಅಧ್ಯಕ್ಷರ ಬಳಿಗೆ ಆಗಮಿಸಿ ಸೆಲ್ಪೀ ತೆಗೆದುಕೊಂಡು ಸಂತಸಪಟ್ಟರು. ಕಾರ್ಯಕ್ರಮ ಮುಕ್ತಾಯವಾಗಿ ಅಧ್ಯಕ್ಷರು ವಾಹನ ಏರುವ ಸಮಯದವರೆಗೂ ವಿದ್ಯಾರ್ಥಿನಿಯರು ಸೆಲ್ಪೀ ಪಡೆದುಕೊಳ್ಳಲು ಮುಂದಾದರು. ವಿದ್ಯಾರ್ಥಿಗಳನ್ನು ತಮ್ಮ ಬಳಿಗೆ ಆಪ್ತವಾಗಿ ಬರಮಾಡಿಕೊಂಡ ಅಧ್ಯಕ್ಷರು, ಸೆಲ್ಪಿಗೆ ಜೊತೆಯಾಗಿ ವಿದ್ಯಾರ್ಥಿಗಳ ಸಂತಷ ಹೆಚ್ಚಿಸಿದರು.
ಸಮಾರಂಭದಲ್ಲಿ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಕಾಲೇಜಿನ ವ್ಯವಸ್ಥಾಪಕ ಮಂಡಳಿಯ ಕಾರ್ಯದರ್ಶಿ ವಕೀಲರಾದ ಗಿರೀಜಾ, ಸ್ತ್ರೀ ಶಕ್ತಿ ಒಕ್ಕೂಟದ ತಾಲೂಕು ಅಧ್ಯಕ್ಷೆ ಈರಮ್ಮ ಗುಂಜಳ್ಳಿ, ಕಾಲೇಜಿನ ಪ್ರಾಚಾರ್ಯಾರಾದ ಡಾ.ಸಂಜಯ ಪವಾರ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರಾಜೇಶ್ವರಿ, ಮುಖಂಡರಾದ ಶ್ರೀದೇವಿ ನಾಯಕ, ಮಂಜುಳಾ ಅಮರೇಶ, ವಂದನಾ ಶಿವಕುಮಾರ, ಪ್ರತಿಭಾ ರೆಡ್ಡಿ, ಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ನವೀವಕುಮಾರ ಯು ಹಾಗೂ ಇನ್ನೀತರರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗಿರಿಜವ್ವ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್