ಮಹಿಳಾ ಸಮುದಾಯದ ನೋವಿಗೆ ಮಿಡಿದ ಮಹಿಳಾ ಆಯೋಗದ ಅಧ್ಯಕ್ಷೆ
ರಾಯಚೂರು, 19 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಪ್ರವಾಸದಲ್ಲಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಮೊದಲ ದಿನದ ಪ್ರವಾಸದ ನಾನಾ ಕಾರ್ಯಕ್ರಮಗಳ ಮಧ್ಯೆ ಮಹಿಳೆಯರ ನೋವಿಗೆ ಆತ್ಮೀಯ ಸ್ಪಂದನೆ ನೀಡಿದರು. ಬೆಳಗ್ಗೆ ಕಾಲೇಜೊಂದರಲ್ಲಿ ಸಂವಾದ ನಡೆಸಿ, ನಂತರ ನಗರ
ಮಹಿಳಾ ಸಮುದಾಯದ ನೋವಿಗೆ ಮಿಡಿದ ಮಹಿಳಾ ಆಯೋಗದ ಅಧ್ಯಕ್ಷೆ


ರಾಯಚೂರು, 19 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಪ್ರವಾಸದಲ್ಲಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಮೊದಲ ದಿನದ ಪ್ರವಾಸದ ನಾನಾ ಕಾರ್ಯಕ್ರಮಗಳ ಮಧ್ಯೆ ಮಹಿಳೆಯರ ನೋವಿಗೆ ಆತ್ಮೀಯ ಸ್ಪಂದನೆ ನೀಡಿದರು.

ಬೆಳಗ್ಗೆ ಕಾಲೇಜೊಂದರಲ್ಲಿ ಸಂವಾದ ನಡೆಸಿ, ನಂತರ ನಗರದ ಎಂಸಿಎಚ್ ಆಸ್ಪತ್ರೆಗೆ ಹೊರಡುವಾಗ ದಾರಿ ಮಧ್ಯೆ ವಾಹನ ನಿಲ್ಲಿಸಿ, ಶಕ್ತಿನಗರಕ್ಕೆ ಹೊರಡುವ ರಸ್ತೆ ಬದಿಯಲ್ಲಿ ಕುಳಿತಿದ್ದ ವಯೋವೃದ್ದೆ ಬಳಿ ತೆರಳಿ ಅವರ ಯೋಗಕ್ಷೇಮ ವಿಚಾರಿಸಿದರು. 'ನನಗೆ ಹಲ್ಲು ನೋವು ಇದೆ, ಕಣ್ಣು ಕಾಣಿಸುತ್ತಿಲ್ಲ' ಎಂದು ಅಜ್ಜಿಯು ತಿಳಿಸಿದರು. 'ನಾನು ವೈದ್ಯೆ ಸಹ ಇದ್ದೀನಿ. ನನಗೆ ತಿಳಿಯುತ್ತದೆ' ಎಂದು ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಅವರು ಆ ವಯೊವೃದ್ಧೆಯ ಕಣ್ಣು, ಹಲ್ಲುಗಳ ಪರೀಕ್ಷಿಸಿದರು. 'ನಿನಗೆ ಆಸ್ಪತ್ರೆಗೆ ದಾಖಲಿಸುತ್ತೇನೆ' ಎಂದು ಅವಳಿಗೆ ಎಳೆನೀರು ನೀಡಿ, ತಾವು ಸಹ ಎಳೆನೀರು ಸೇವಿಸಿ ಆಸ್ಪತ್ರೆಯತ್ತ ಸಾಗಿದರು.

ಸಖಿ ಸೆಂಟರನಲ್ಲಿ ಸ್ಪಂದನೆ: ಎಂಸಿಎಚ್ ಆಸ್ಪತ್ರೆಯಿಂದ ಸಖಿ ಒನ್ ಸ್ಟಾಪ್ ಸೆಂಟರಗೆ ಆಗಮಿಸಿ ಪರಿಶೀಲನೆ ನಡೆಸುವ ವೇಳೆ, ರಾಯಚೂರ ಜಿಲ್ಲೆಯ ಹೊಸೂರ ಗ್ರಾಮದ ಸಂಗೀತಾ ಎನ್ನುವ ಮಹಿಳೆಯೊಬ್ಬರು ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಅವರ ಬಳಿ ಬಂದು, 'ನನ್ನ ಪತಿಯಿಂದ ನನಗೆ ಮೋಸವಾಗಿದೆ.. ನನಗೆ ನ್ಯಾಯ ಕೊಡಿಸಿ' ಎಂದು ಕಣ್ಣೀರು ಹಾಕಿದರು. ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಅವರು, ಅವರ ಕಣ್ಣೀರು ಒರೆಯಿಸಿ, ಅಪ್ಪಿಕೊಂಡು ಸಾಂತ್ವನ ಹೇಳಿದರು. ಸಂಗೀತಾ ಅವರ ಸಂಪರ್ಕ ಸಂಖ್ಯೆ ಪಡೆದುಕೊಂಡರು.

ರಿಮ್ಸನಲ್ಲಿ ಸ್ಪಂದನೆ: ಸಖಿ ಒನ್ ಸ್ಟಾಪ್ ಸೆಂಟರನಿಂದ ರಿಮ್ಸ್ ಆಸ್ಪತ್ರೆಗೆ ತೆರಳಿ ವಿವಿಧ ವಾರ್ಡಗಳ ಪ್ರವೇಶಿಸಿ ಪರಿಶೀಲನೆ ನಡೆಸುವ ವೇಳೆಯಲ್ಲಿ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಅವರು ರೋಗಿ ಸಂಬಂಧಿಕರ ಬಳಿಯಲ್ಲಿ ಕುಳಿತು, 'ಏನವ್ವ.. ಯಾವ ಊರಿಂದ ಬಂದಿದ್ದೀರಿ ನೀವು.. ಊಟ ಮಾಡ್ರವ್ವ.. ನನಗು ಹಸುವಾಗಿದೆ ಕಣವ್ವ.. ಬೆಳಗ್ಗೆಯಿಂದ ಏನೂ ತಿಂದಿಲ್ಲ..

ರೊಟ್ಟಿ ತಿನ್ಲಾ' ಎಂದು ಹೇಳುತ್ತ ರೋಗಿಯೊಬ್ಬರ ಸಂಬಂಧಕರಿಂದ ಎರಡು ಬಾರಿ ಕೈತುತ್ತು ಪಡೆದರು.

ಆ ಜಾತಿ, ಈ ಜಾತಿ ಎಂದು ಬೇಧ-ಭಾವ ಮಾಡುವುದು ಈ ಕಾಲಕ್ಕೂ ನಿಲ್ಲುತ್ತಿಲ್ಲ. ನೊಂದು ಬರುವ ಎಲ್ಲ ಮಹಿಳೆಯರಿಗೂ ಸ್ಪಂದಿಸಿ, ಆತ್ಮೀಯವಾಗಿ ಮಾತನಾಡಿಸಿ, ಅಪ್ಪಿಕೊಂಡು ಧೈರ್ಯ ಹೇಳುವ, ಸಾಂತ್ವನ ಹೇಳುವ, ಅವರ ಬಳಿ ಕುಳಿತು ಊಟ ಮಾಡುವ ನಿಮ್ಮ ನಡೆ ಇಡೀ ಮಹಿಳಾ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಇದೆ ವೇಳೆ ಮುಖಂಡರಾದ ಶ್ರೀದೇವಿ ನಾಯಕ ಅವರು ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮುಖಂಡರಾದ ಶ್ರೀದೇವಿ ಶ್ರೀನಿವಾಸ, ಈರಮ್ಮ ಗುಂಜಳ್ಳಿ, ಮಂಜುಳಾ ಅಮರೇಶ, ವಂದನಾ ಶಿವಕುಮಾರ, ಪ್ರತಿಭಾ ರೆಡ್ಡಿ, ಲಕ್ಷ್ಮಿ ಹಾಗೂ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande