ಕೊಪ್ಪಳ, 19 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ನಿವೃತ್ತ ಯೋಧರು ಹಾಗೂ ಹುತಾತ್ಮ ಯೋಧರ ಅವಲಂಬಿತರಿಗೆ ಮತ್ತು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಅವಲಂಬಿತರಿಗೆ ನಿಯಮಾನುಸಾರ ಸರ್ಕಾರದ ಸೌಲಭ್ಯ ನೀಡದೇ ಕರ್ತವ್ಯ ಲೋಪ ಎಸಗುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ದೂರಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಇದ್ದು, ಈ ಬಗ್ಗೆ ಕೂಲಂಕುಷವಾದ ತನಿಖೆಯ ಅವಶ್ಯಕತೆ ಇರುವುದರಿಂದ ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಅಧಿಕಾರಿಗಳ ಮೇಲೆ ಕರ್ನಾಟಕ ಲೋಕಾಯುಕ್ತದ ಗೌರವಾನ್ವಿತ ಉಪ ಲೋಕಾಯುಕ್ತರಾದ ನ್ಯಾ. ಬಿ ವೀರಪ್ಪ ರವರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ನಿವೃತ್ತರಾದ ಯೋಧರಿಗೆ ಹಾಗೂ ಹುತಾತ್ಮ ಯೋಧರ ಅವಲಂಬಿತರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಅವರ ಅವಲಂಬಿತರಿಗೆ ನಿಯಮಾನುಸಾರ ಸರ್ಕಾರದಿಂದ ದೊರೆಯಬೇಕಾದ ನಿವೇಶನವನ್ನು ನಿಗದಿತ ಸಮಯದಲ್ಲಿ ನೀಡದೆ ಸರ್ಕಾರಿ, ಸಾರ್ವಜನಿಕ ನೌಕರ, ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿರುವುದು ಹಾಗೂ ಸಂವಿಧಾನಾತ್ಮಕವಾಗಿ ನೀಡಬೇಕಾದ ಪರಿಹಾರವನ್ನು (ಜಮೀನು) ಕಲ್ಪಿಸುವಲ್ಲಿ ನಿರ್ಲಕ್ಷ್ಯ ಮತ್ತು ವಿಳಂಬ ಧೋರಣೆ ತೋರಿದ ಆರೋಪವು ಕೇಳಿಬಂದಿರುತ್ತದೆ. ಈ ಬಗ್ಗೆ ಕರ್ತವ್ಯಲೋಪ ಎಸಗುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಕಾಲದಲ್ಲಿ ಕಲ್ಪಿಸುವ ಸರ್ಕಾರದ ವಿವಿಧ ಇಲಾಖೆಗಳಿಂದ ಪೂರಕ ಸ್ಪಂದನೆ ದೊರೆಯದೆ ಇರುವುದು ಲೋಕಾಯುಕ್ತ ಕಾಯ್ದೆಯಡಿ ದುರಾಡಳಿತ ವ್ಯಾಪ್ತಿಗೆ ಒಳಪಡುವುದರಿಂದ ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿರುತ್ತಾರೆ.
ಈ ಆರೋಪದ ಹಿನ್ನೆಲೆಯಲ್ಲಿ ಕೊಪ್ಪಳ ಉಪ ವಿಭಾಗಾಧಿಕಾರಿ ಮಹೇಶ್ ಮಾಲಗಿತ್ತಿ, ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ, ಗಂಗಾವತಿ ತಹಶೀಲ್ದಾರ ಯು. ನಾಗರಾಜ, ಕುಷ್ಟಗಿ ತಹಶೀಲ್ದಾರ ಅಶೋಕ ಎಸ್. ಶಿಗ್ಗಾವಿ, ಯಲಬುರ್ಗಾ ತಹಶೀಲ್ದಾರ ಬಸವರಾಜ, ಕಾರಟಗಿ ತಹಶೀಲ್ದಾರ ಕುಮಾರಸ್ವಾಮಿ, ಕನಕಗಿರಿ ತಹಶೀಲ್ದಾರ ವಿಶ್ವನಾಥ ಮುರಡಿ, ಕುಕನೂರು ತಹಶೀಲ್ದಾರ ಪ್ರಾಣೇಶ ಇವರ ಮೇಲೆ ಉಪ ಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಸರ್ಕಾರದ ಆದೇಶಗಳು, ಸುತ್ತೋಲೆಗಳು ಹಾಗೂ ಕಾನೂನಿನ್ವಯ, ನಿವೃತ್ತರಾದ ಯೋಧರಿಗೆ ಹಾಗೂ ಹುತಾತ್ಮ ಯೋಧರು ಅವಲಂಬಿತರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಅವರ ಅವಲಂಬಿತರಿಗೆ ನಿಯಮಾನುಸಾರ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಹಾಗೂ ನಿವೇಶನವನ್ನು ನೀಡುವಂತೆ ಗೌರವಾನ್ವಿತ ಉಚ್ಚ ನ್ಯಾಯಾಲಯದ ಆದೇಶಗಳು ಇದ್ದರೂ ಸಹ ಸರ್ಕಾರಿ ನೌಕರರು ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮರೆತು, ನಿವೃತ್ತರಾದ ಯೋಧರಿಗೆ ಹಾಗೂ ಹುತಾತ್ಮ ಯೋಧರ ಅವಲಂಬಿತರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಅವರ ಅವಲಂಬಿತರಿಗೆ ನಿಯಮಾನುಸಾರ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಹಾಗೂ ನಿವೇಶನವನ್ನು ನೀಡಲು ಯಾವುದೇ ಕ್ರಮ ಕೈಗೊಳ್ಳದೆ ತೊಂದರೆ ನೀಡುತ್ತಿರುವುದು ವಿಷಾದಕರ. ದೇಶವನ್ನು ರಕ್ಷಿಸಲು ಪ್ರಾಣ ನೀಡಿದ ಹಾಗೂ ತಮ್ಮ ಅಂಗಾಂಗಗಳನ್ನು ಕಳೆದುಕೊಂಡ ಯೋಧರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನೀಡುವುದು ಎಲ್ಲಾ ಭಾರತೀಯರ ಕರ್ತವ್ಯವಾಗಿರುತ್ತದೆ ಹಾಗೂ ನಮ್ಮ ನಿವೃತ್ತ ಹಾಗೂ ಹುತಾತ್ಮ ಯೋಧರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಅವರ ಅವಲಂಬಿತರಿಗೆ ಅವಮಾನ ಮಾಡಿ ಅಗೌರವ ಉಂಟು ಮಾಡುತ್ತಿರುವುದು ಕಂಡುಬಂದಿದ್ದು ಈ ಕುರಿತು ಗೌರವಾನ್ವಿತ ಉಪ ಲೋಕಾಯುಕ್ತರು ತನಿಖೆ ನಡೆಸುವರು ಎಂದು ಕರ್ನಾಟಕ ಲೋಕಾಯುಕ್ತದ ಕೊಪ್ಪಳ ಕಚೇರಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್