ಕುದರಿಮೋತಿ ಗ್ರಾಮದಲ್ಲಿ ಸಜ್ಜೆ ಬೆಳೆಯ ಕ್ಷೇತ್ರೋತ್ಸವ
ಕೊಪ್ಪಳ, 19 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದವರಿಂದ ಸಜ್ಜೆ ಬೆಳೆಯ ಮುಂಚೂಣಿ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವನ್ನು ಕುದುರಿಮೋತಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಮುಂಚೂಣಿ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವದಲ್ಲಿ
ಕುದರಿಮೋತಿ ಗ್ರಾಮದಲ್ಲಿ ಸಜ್ಜೆ ಬೆಳೆಯ ಕ್ಷೇತ್ರೋತ್ಸವ


ಕೊಪ್ಪಳ, 19 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದವರಿಂದ ಸಜ್ಜೆ ಬೆಳೆಯ ಮುಂಚೂಣಿ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವನ್ನು ಕುದುರಿಮೋತಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು.

ಮುಂಚೂಣಿ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವದಲ್ಲಿ ಅಳವಡಿಸಿಕೊಳ್ಳಲಾದ ವಿ.ಪಿ.ಎಂ.ಹೆಚ್. 14 ಎನ್ನುವ ಸಜ್ಜೆಯ ಬೆಳೆಯ ಸಂಕರಣ ತಳಿಯನ್ನು ವಿಜಯಪುರ ಕೃಷಿ ಸಂಶೋಧನಾ ಕೇಂದ್ರದಿಂದ ಅಭಿವೃದ್ಧಿ ಪಡಿಸಲಾಗಿದ್ದು, ಆಯ್ದ ರೈತರಿಗೆ ಪ್ರಾತ್ಯಕ್ಷೆಯನ್ನು ಜೂನ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕುದರಿಮೋತಿಯ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವದಲ್ಲಿ ಗ್ರಾಮದ 20ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ವಾಮನ ಮೂರ್ತಿ ಅವರು ವಿ.ಪಿ.ಎಂ.ಹೆಚ್. 14 ಸಂಕರಣ ತಳಿಯ ಕೆಲವು ವಿಶೇಷತೆಗಳನ್ನು ತಿಳಿಸಿದರು. ಈ ಸಂಕರಣ ತಳಿಯು ಕಟಾವಿಗೆ ಬಂದಿದ್ದು, ಮಳೆ ಆಶ್ರಯದಲ್ಲಿ ಕೂಡ 1 ಎಕರೆಯಲ್ಲಿ 8-10 ಕ್ವಿಂಟಲ್ ಕಾಳಿನ ಇಳುವರಿ ಮತ್ತು 4 ಟನ್‍ನಷ್ಟು ಮೇವಿನ ಇಳುವರಿ ಕೊಡುತ್ತದೆ ಎಂದು ತಿಳಿಸಿದರು. ಪ್ರಸ್ತುತ ಈ ಬೆಳೆಗೆ ಪ್ರಮುಖವಾದ ಕೀಟ ಮತ್ತು ರೋಗದ ಬಾಧೆ ಕಂಡುಬಂದಿರುವುದಿಲ್ಲ. ಬೀಜ ಮತ್ತು ಕೊಟ್ಟಿಗೆ ಗೊಬ್ಬರದ ಹೊರತಾಗಿ ಯಾವುದೇ ಖರ್ಚು ಮಾಡಿರುವುದಿಲ್ಲ. ಇದೊಂದು ಉತ್ತಮ ಸಂಕರಣ ತಳಿಯಾಗಿದ್ದು, ರೈತರಿಗೆ ಹೆಚ್ಚಿನ ಲಾಭ ಕೊಡಬಲ್ಲದು ಎಂದು ತಿಳಿಸಿದರು.

ಫಲಾನುಭವಿ ರೈತರಾದ ಶರಣೇಗೌಡ ಮಾತನಾಡಿ, ಇದೊಂದು ಉತ್ತಮ ತಳಿಯಾಗಿದ್ದು, ಕುರಿ ಸಾಕಾಣಿಕೆ ಮಾಡುತ್ತಿರುವ ನನಗೆ ಹೆಚ್ಚಿನ ಮೇವಿನ ಉತ್ಪನ್ನವನ್ನು ಕೊಡುತ್ತದೆ ಎಂದು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಪ್ರಯೋಗಶಾಲಾ ಸಹಾಯಕರಾದ ಪ್ರಕಾಶ ಬಣಕಾರ ಅವರು ಮುಂಚೂಣಿ ಪ್ರಾತ್ಯಕ್ಷಿಕೆ ಕೈಗೊಳ್ಳುವ ಮೊದಲು ಗುಚ್ಚ ಗ್ರಾಮಗಳ ಮತ್ತು ರೈತರ ಆಯ್ಕೆ ಪ್ರಕ್ರಿಯೆ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರು ಬೆಳೆಯನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಡಾ. ಎಂ.ವಿ.ರವಿ., ವಿಸ್ತರಣಾ ಮುಂದಾಳು, ಮೊ.ನಂ. 9480247745 ಮತ್ತು ಶ್ರೀ. ವಾಮನಮೂರ್ತಿ, ಸಹಾಯಕ ಪ್ರಾಧ್ಯಾಪಕರು, ಮೊ.ನಂ. 8217696837, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದ ವಿಜ್ಞಾನಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande