ರಾಯಚೂರು, 19 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಯಚೂರು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯು ವಿಶೇಷ ಕಾಳಜಿ ವಹಿಸಿ ನವೀಕರಿಸಿದ, ರಾಯಚೂರ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದ ಬಳಿಯಲ್ಲಿನ ನಗರ ಕೇಂದ್ರ ಗ್ರಂಥಾಲಯದ ಉದ್ಘಾಟನೆಗೊಂಡಿತು.
ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಬೆಳಗಿನ ವಿವಿಧ ಕಾರ್ಯಕ್ರಮಗಳ ಮಧ್ಯೆ ಗ್ರಂಥಾಲಯಕ್ಕೆ ತೆರಳಿ ನವೀಕೃತಗೊಂಡ ಗ್ರಂಥಾಲಯದ ವೀಕ್ಷಣೆ ನಡೆಸಿದರು.
ಇದೆ ವೇಳೆ ಸಚಿವರು, ಮಹಾತ್ಮರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ದೀಪ ಬೆಳಗಿಸಿ ಗ್ರಂಥಾಲಯವನ್ನು ಉದ್ಘಾಟಿಸಿದರು.
ಪರಿಪೂರ್ಣವಾಗಿ ನವೀಕರಿಸಿದ ಗ್ರಂಥಾಲಯ ಕಟ್ಟಡದಲ್ಲಿ ಸುತ್ತಿದ ಸಚಿವರು, ಗ್ರಂಥಾಲಯದ ಮೊದಲ ಮಹಡಿಯಲ್ಲಿ ಹೊಸದಾಗಿ ನವೀಕರಿಸಿದ ಸ್ಪರ್ಧಾತ್ಮಕ ಪರೀಕ್ಷಾ ವಿಭಾಗದ ವೀಕ್ಷಣೆ ನಡೆಸಿದರು.
ಗ್ರಂಥಾಲಯದಲ್ಲಿ ಅಚ್ಚುಕಟ್ಟಾಗಿ ಅಳವಡಿಸಿದ ಕಂಪ್ಯೂಟರ್‍ಗಳು, ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್ ಮತ್ತು ಮಕ್ಕಳ ಗ್ರಂಥಾಲಯ ವಿಭಾಗಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಮತ್ತು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ನಿರ್ಮಲ ಹೆಚ್.ಹೊಸೂರು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಈ ನಗರ ಗ್ರಂಥಾಲಯದ ಕಟ್ಟಡವು ಹಳೆಯದಾಗಿದ್ದು, ಸ್ಥಾಪನೆಯಾದ ನಂತರ ಇದೆ ಮೊದಲನೇ ಬಾರಿಗೆ ನವೀಕರಣಗೊಳಿಸಿ, ಓದುಗ ಸ್ನೇಹಿ ವಾತಾವರಣ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಗ್ರಂಥಾಲಯದ ಸಿಬ್ಬಂದಿ ರಾಘವೇಂದ್ರ ರಾವ್, ರಾಗಿಣಿ, ಮರಿಯಪ್ಪ, ರಾಜಶ್ರೀ, ತಿಮ್ಮಲಮ್ಮ, ವಿನೋಧ, ಪಾಡುರಂಗ ಸೇರಿದಂತೆ ಪಾಲಿಕೆ ಎಂಜಿನಿಯರ್‍ಗಳು, ನಿರ್ಮತಿ ಕೇಂದ್ರದ ಅಧಿಕಾರಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್