ರಾಯಚೂರು, 19 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಇನ್ಸುಲಿನ್ ಸಿಗುತ್ತಿಲ್ಲ. ಮಗಳಿಗೆ ಚಿಕಿತ್ಸೆ ಕೊಡಿಸುವುದು ಹೊರೆಯಾಗುತ್ತಿದೆ ಎಂದು ಸಿಂಧನೂರ ತಾಲೂಕಿನ ಕುರಕುಂದ ಗ್ರಾಮದ ನಿವಾಸಿ ಗುಡದಪ್ಪ ಅವರು ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಅವರ ಬಳಿ ಅಳಲು ತೋಡಿಕೊಂಡರು.
ಸೆ.18ರಂದು, ಸಿಂಧನೂರಿನ ಟೌನ ಹಾಲಗೆ ಮಗಳೊಂದಿಗೆ ಆಗಮಿಸಿದ್ದ ಗುಡದಪ್ಪ ಅವರು ಕಾರ್ಯಕ್ರಮದ ಮಧ್ಯೆದಲ್ಲಿ ವೇದಿಕೆ ಏರಿ ಅಧ್ಯಕ್ಷರ ಬಳಿಗೆ ಬಂದು ತಮ್ಮ ಪುತ್ರಿಯ ಅನಾರೋಗ್ಯದ ವಿಷಯವನ್ನು ಪ್ರಸ್ತಾಪಿಸಿದರು. ಸುಗರ್ ಪ್ರಮಾಣ ಚೆಕ್ ಮಾಡುವ ಸೂಜಿ, ಪಿನ್ ಖರೀದಿ ಮತ್ತು ಇನ್ಸುಲಿನಗೆ ಪ್ರತಿ ತಿಂಗಳು 5 ಸಾವಿರ ರೂ ಖರ್ಚಾಗುತ್ತದೆ. ಬಡವರಾದ ನಮಗೆ ಇದರಿಂದಾಗಿ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದೆ ಎಂದು ಗುಡದಪ್ಪ ಅವರು ಅಲವತ್ತು ಕೊಂಡರು.
ಈ ವೇಳೆ, ಅಧ್ಯಕ್ಷರು ಮದುಮೇಹ ಪೀಡಿತ ವಿದ್ಯಾರ್ಥಿನಿಯೊಂದಿಗೆ ಮಾತನಾಡಿ, ಅವಳ ಆರೋಗ್ಯದ ಬಗ್ಗೆ ಕೇಳಿದರು.
ಏಳನೇ ವಯಸ್ಸಿಗೆ ನನಗೆ ಮದುಮೇಹ ಬಂದಿದೆ. ಈಗ 10ನೇ ತರಗತಿಯಲ್ಲಿದ್ದೇನೆ ಎಂದು ವಿದ್ಯಾರ್ಥಿನಿ ತಿಳಿಸಿದಾಗ, ಸಿಂಧನೂರ ತಾಲೂಕು ವೈದ್ಯಾಧಿಕಾರಿಗೆ ವೇದಿಕೆಗೆ ಕರೆದು, ವಿದ್ಯಾರ್ಥಿನಿಯ ದೂರಿನ ಬಗ್ಗೆ ಚರ್ಚಿಸಿದರು. ವಿದ್ಯಾರ್ಥಿನಿಯ ಅನಾರೋಗ್ಯದ, ಸರ್ಕಾರಿ ಔಷಧಾಲಯಗಳಲ್ಲಿ ಇನ್ಸುಲಿನ್ ಸಿಗುತ್ತಿಲ್ಲ ಎನ್ನುವ ದೂರನ್ನು ತಾಲೂಕು ಆರೋಗ್ಯಾಧಿಕಾರಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿನಿ ಹಾಗೂ ಅವಳ ಪಾಲಕರನ್ನು ಆಸ್ಪತ್ರೆಗೆ ಕರೆಯಿಸಿ, ಮದುಮೇಹಕ್ಕೆ ಉಚಿತ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ಸಿಂಧನೂರ ತಾಲೂಕು ವೈದ್ಯಾಧಿಕಾರಿ ತಿಳಿಸಿದರು.
ಅರ್ಜಿ ಸಲ್ಲಿಸಲು ದುಂಬಾಲು: ಸಿಂಧನೂರನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಾಲೂಕುಡಳಿತ, ತಾಲೂಕು ಪಂಚಾಯತ್, ತಾಲೂಕು ಪೊಲೀಸ್ ಇಲಾಖೆ, ಸಿಂಧನೂರ ಹಾಗೂ ತುರವಿಹಾಳ ಶಿಶು ಅಭಿವೃದ್ಧಿ ಕಾರ್ಯಾಲಯ ಮತ್ತು ಸಿಂಧನೂರ ತಾಲೂಕು ಇಂದಿರಾಗಾಂಧಿ ಸ್ತ್ರಿ ಶಕ್ತಿ ಒಕ್ಕೂಟದ ಆಶ್ರಯದಲ್ಲಿ ಸೆ.18ರಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಿಂಧನೂರ ನಗರ ಸೇರಿದಂತೆ ಸುತ್ತಲಿನ ನಾನಾ ಕಡೆಗಳಿಂದ ಮಾಜಿ ದೇವದಾಸಿ ಮಹಿಳೆಯರು ಹಾಗೂ ಸಿಂದೋಲ ಸಮುದಾಯದ ಅಲೆಮಾರಿ ಮಹಿಳೆಯರು ಮತ್ತು ಸಾರ್ವಜನಿಕರು ಆಗಮಿಸಿ ಟೌನ್ ಹಾಲನಲ್ಲಿ ಕಿಕ್ಕಿರಿದು ಸೇರಿದ್ದರು. ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಅವರಿಗೆ ತಮ್ಮ ದೂರು ಅರ್ಜಿ ಸಲ್ಲಿಸಲು ನಾ ಮುಂದೆ ತಾ ಮುಂದೆ ಎಂದು ದುಂಬಾಲು ಬಿದ್ದು, ಜನರನ್ನು ವೇದಿಕೆಯಿಂದ ಕೆಳಗಿಳಿಸಲು ಪೆÇಲೀಸರು ಹರಸಾಹಸಪಟ್ಟರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್