ಕೊಪ್ಪಳ, 19 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗಂಗಾವತಿ ನಗರದ ಆಸ್ತಿ ಹಾಗೂ ನೀರಿನ ತೆರಿಗೆಯನ್ನು ಸಂಗ್ರಹಿಸಲು ನಗರಸಭೆ ವ್ಯಾಪ್ತಿಯ ಡೇ-ನಲ್ಮ್ ಅಭಿಯಾನದಡಿ ನೋಂದಾಯಿಸಲ್ಪಟ್ಟ ಅರ್ಹ ಹಾಗೂ ಆಸಕ್ತ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ತೆರಿಗೆ ವಸೂಲಾತಿಗಾಗಿ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಿದೆ.
ಗಂಗಾವತಿ ನಗರ ಸ್ಥಳೀಯ ಸಂಸ್ಥೆಯಲ್ಲಿನ ನೀರಿನ ಬಳಕೆಯ ಹಿಂದಿನ ಬಾಕಿ ಮೊತ್ತ ಬಡ್ಡಿ ಸಹಿತವಾಗಿ ಮತ್ತು ಪುಸ್ತಕ ವಾರ್ಷಿಕ ಸಹಿತವಾಗಿ ವಸೂಲಿ ಮಾಡುವುದು ಹಾಗೂ ಬಹುದಿನಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ವಾರ್ಷಿಕ ಬೇಡಿಕೆಗಳಿಗೆ ಅನುಗುಣವಾಗಿ ಸಮರ್ಪಕ ವಸೂಲಿ ಮಾಡಲು ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳ ಸೇವೆಯನ್ನು ಪಡೆಯಲು ಮತ್ತು ಸ್ವ-ಸಹಾಯ ಗುಂಪುಗಳಿಗೆ ವಸೂಲಾದ ಮೊತ್ತದಲ್ಲಿ ಶೇ. 5 ರಷ್ಟನ್ನು ಪ್ರೋತ್ಸಾಹ ಧನದ ರೂಪದಲ್ಲಿ ನೀಡಲು ಸರ್ಕಾರ ಆದೇಶಿಸಿದೆ.
ಅದರಂತೆ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತರು ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಅಕ್ಟೋಬರ್ 15 ರೊಳಗೆ ಡೇ-ನಲ್ಮ್ ಅಭಿಯಾನದಡಿ ನೋಂದಾಯಿಸಲ್ಪಟ್ಟ ಅರ್ಹ ಹಾಗೂ ಆಸಕ್ತ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರು ಅರ್ಜಿ ಸಲ್ಲಿಸಬೇಕು. ಅರ್ಹತಾ ಮಾನದಂಡಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಪೌರಾಯುಕ್ತರು, ನಗರಸಭೆ ಗಂಗಾವತಿ ರವರನ್ನು ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದು ಎಂದು ಗಂಗಾವತಿ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್