ನವದೆಹಲಿ, 17 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ದೊರೆತ ಸ್ಮರಣಿಕೆಗಳು ಹಾಗೂ ಉಡುಗೊರೆಗಳ ಇ-ಹರಾಜು ಇಂದಿನಿಂದ ಆರಂಭವಾಗಿದೆ.
ಏಳನೇ ಆವೃತ್ತಿಯ ಈ ಹರಾಜಿನಲ್ಲಿ 1,300 ಕ್ಕೂ ಹೆಚ್ಚು ವಸ್ತುಗಳನ್ನು ಜನರು ಖರೀದಿಸಲು ಬಿಡ್ ಮಾಡಬಹುದಾಗಿದೆ. ಹರಾಜು ಅಕ್ಟೋಬರ್ 2 ರವರೆಗೆ ಮುಂದುವರಿಯಲಿದ್ದು, ಆಸಕ್ತರು PMMomentos ವೆಬ್‌ಸೈಟ್ ಮೂಲಕ ಭಾಗವಹಿಸಬಹುದು.
ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ನವದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಲ್ಲಿ ಹರಾಜಿನ ವಿವರಗಳನ್ನು ತಿಳಿಸಿದರು. ಈ ಹರಾಜಿನಲ್ಲಿ ವರ್ಣಚಿತ್ರಗಳು, ಕಲಾಕೃತಿಗಳು, ಶಿಲ್ಪಗಳು, ದೇವರು-ದೇವತೆಗಳ ವಿಗ್ರಹಗಳು ಹಾಗೂ ಕ್ರೀಡಾ ಸಾಮಗ್ರಿಗಳು ಕೂಡ ಲಭ್ಯವಿವೆ.
ಹರಾಜಿನಿಂದ ಸಂಗ್ರಹವಾಗುವ ಮೊತ್ತವನ್ನು ನಮಾಮಿ ಗಂಗೆ ಯೋಜನೆಗೆ ಹಸ್ತಾಂತರಿಸಲಾಗುವುದು. 2019 ರ ಜನವರಿಯಲ್ಲಿ ಮೊದಲ ಬಾರಿಗೆ ಇ-ಹರಾಜು ನಡೆದಿದ್ದು, ಅದರಿಂದ ಇಂದಿನವರೆಗೆ 50 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತ ಸಂಗ್ರಹಗೊಂಡಿದೆ. ತಮ್ಮ ಎಲ್ಲಾ ಉಡುಗೊರೆಗಳನ್ನು ಈ ಸಮಾಜಮುಖಿ ಕಾರ್ಯಕ್ಕೆ ಅರ್ಪಿಸಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದೂ ಸಚಿವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa