ವಿಜಯಪುರ, 16 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್- 2025ರಲ್ಲಿ ಪಾಲ್ಗೊಳ್ಳಬೇಕು ಎಂದು ಕಾಖಂಡಕಿ ಗುರುದೇವ ಆಶ್ರಮದ ಶ್ರೀ ಶಿವಯೋಗೇಶ್ವರ ಸ್ವಾಮೀಜಿ ಭಕ್ತರಿಗೆ ಕರೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿಯಲ್ಲಿನ ಆಶ್ರಮಕ್ಕೆ ತೆರಳಿದ ವೃಕ್ಷಥಾನ್ ಹೆರಿಟೇಜ್ ಕೋರ್ ಕಮಿಟಿ ಸದಸ್ಯರಾದ ಡಾ. ರಾಜು ಯಲಗೊಂಡ, ವೀರೇಂದ್ರ ಗುಚ್ಚೆಟ್ಟಿ ಹಾಗೂ ವಿನಯಕುಮಾರ ಎ. ಕಂಚ್ಯಾಣಿ ಅವರು ಸ್ವಾಮೀಜಿಯನ್ನು ಭೇಟಿ ಮಾಡಿ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು.
ಈ ಆಹ್ವಾನ ಸ್ವೀಕರಿಸಿ ಮಾತಮಾಡಿದ ಸ್ವಾಮೀಜಿ, ನಾನು ಈ ಬಾರಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ 5 ಕಿ. ಮೀ. ವಿಭಾಗದಲ್ಲಿ ಪಾಲ್ಗೊಳ್ಳುತ್ತೇನೆ. ಜಲ, ವೃಕ್ಷ, ಶಿಕ್ಷಣ, ಆರೋಗ್ಯ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಆಯೋಜಿಸಿರುವ ಈ ಓಟದಲ್ಲಿ ತಾವೂ ಪಾಲ್ಗೊಳ್ಳಬೇಕು. ನಾನಾ ಗ್ರಾಮಗಳ ಭಕ್ತರು ನಾಲ್ಕೈದು ಕಿ. ಮೀ. ನಡೆದುಕೊಂಡು ಆಶ್ರಮಕ್ಕೆ ಬರುತ್ತೀರಿ. ಹೀಗಾಗಿ ಹೆರಿಟೇಜ್ ರನ್ ನಲ್ಲಿ 5 ಕಿ. ಮೀ. ವಿಭಾಗದಲ್ಲಿ ಪಾಲ್ಗೊಳ್ಳಬೇಕು ಎಂದು ಸ್ಥಳದಲ್ಲಿ ಉಪಸ್ಥಿತರಿದ್ದ ಭಕ್ತರಿಗೆ ಕರೆ ನೀಡಿದರು.
ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗೌರವಾರ್ಥ ಮಮದಾಪುರ ಬಳಿ ಅರಣ್ಯ ನಿರ್ಮಿಸಲಾಗಿದೆ. ಪರಿಸರಕ್ಕೆ ಪೂರ್ವಾಗಿರುವ ಈ ಕಾಯಕದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಈ ಮೂಲಕ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ಪ್ರಕೃತಿಗೆ ನಮ್ಮ ಅಳಿಲು ಸೇವೆ ಸಲ್ಲಿಸಬೇಕು ಎಂದು ಶ್ರೀ ಶಿವಯೋಗೇಶ್ವರ ಸ್ವಾಮೀಜಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande