ವಿಜಯಪುರ, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿರುವ ಮೌಲ್ಯ ಹಾಗೂ ವಿಚಾರಗಳನ್ನು ಮುಂದಿನ ಪೀಳಿಗೆಗೆ ಗೊತ್ತುಪಡಿಸುವ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯವಾಗಬೇಕಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವೆಲ್ಲರೂ ಸಂವಿಧಾನದಲ್ಲಿರುವ ಮೌಲ್ಯಗಳಿಗೆ ಒತ್ತುಕೊಟ್ಟು ಜೀವನ ಸಾಗಿಸುವಂತಾಗುವ ಉದ್ದೇಶದಿಂದ ಪ್ರತಿ ವರ್ಷ ಸೆಪ್ಟೆಂಬರ ೧೫ ರಂದು ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ ನಮ್ಮದಾಗಿದೆ ಎಂದರು.
ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ ನಮ್ಮ ದೇಶಕ್ಕೆ ಡಾ.ಬಿ.ಆರ್.ಅಂಬೇಡ್ಕರ ನೀಡುವ ಮಹಾನ್ ಕೊಡುಗೆ ಸಂವಿಧಾನ. ಇದರ ಆಧಾರದ ಮೇಲೆ ಆಡಳಿತ ಯಂತ್ರ ನಡೆಸಲಾಗುತ್ತಿದೆ. ಎಲ್ಲರಿಗೂ ಸಮಾನತೆಯ ಹಕ್ಕುಗಳನ್ನು ಕೊಟ್ಟಿರುವುದು ನಮ್ಮ ಸಂವಿಧಾನ. ನಾವು ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದೇವೆ ಹೊರತು ಕರ್ತವ್ಯದ ಬಗ್ಗೆ ಮಾತನಾಡುತ್ತಿಲ್ಲ. ಹಕ್ಕುಗಳು ಯಾವಾಗ ಸೀಗುತ್ತವೆ ಎಂದರೆ ಕರ್ತವ್ಯ ಮಾಡಿದಾಗ ಮಾತ್ರ. ಸಮಾನತೆ ಎಂಬುದು ನಮ್ಮ ರಕ್ತದಲ್ಲಿಯೇ ಇದ್ದು, ಅದನ್ನು ಕಲಿಸಿಕೊಡುವ ಅಗತ್ಯವಿಲ್ಲ. ನಾವು ಮಾಡುವ ಕೆಲವೊಂದು ತಪ್ಪುಗಳಿಂದ ಸಮಾಜದಲ್ಲಿ ಗೊಂದಲ ಉಂಟಾಗುತ್ತಿದೆ. ಅದನ್ನು ಯಾರು ಮಾಡಬಾರದು ಎಂದರು.
ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಅಂದರೆ ಕೇವಲ ಆಡಳಿತ ವ್ಯವಸ್ಥೆ ಅಲ್ಲ, ಅದು ನಮ್ಮ ಸ್ವಾತಂತ್ರö್ಯದ ಜೀವಾಳ, ಸಮಾನತೆಯ ನಂಬಿಕೆ ಮತ್ತು ನ್ಯಾಯದ ದಾರಿಯಾಗಿದೆ. ಮತದಾನ ಕೇವಲ ಹಕ್ಕು ಮಾತ್ರವಲ್ಲ ಅದು ಕರ್ತವ್ಯ, ಹೊಣೆಗಾರಿಕೆ ಮತ್ತು ಪ್ರಜಾಸತ್ತಾತ್ಮಕ ಶಕ್ತಿಯಾಗಿದೆ. ನಮ್ಮ ಮತದಾನದ ಹಕ್ಕು ನಮ್ಮ ಸಮಾನತೆಯ ಚಿಹ್ನೆ, ಸ್ವಾತಂತ್ರö್ಯದ ಪ್ರತೀಕ, ಜೀವಾಳವಾಗಿದೆ. ನ್ಯಾಯ, ಸ್ವಾತಂತ್ರö್ಯ, ಸಮಾನತೆ ಮತ್ತು ಸಹೋದರತೆಯ ಭಾರತವನ್ನು ಕಟ್ಟುವ ಕನಸು ಅಂಬೇಡ್ಕರ ಹೊಂದಿದ್ದರು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಶಾಸಕರು ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವಾಯ್.ಮೇಟಿ ಮಾತನಾಡಿ ದೇಶಕ್ಕೆ ಅರ್ಥಪೂರ್ಣವಾದ ಸಂವಿಧಾನವನ್ನು ಡಾ.ಬಿ.ಆರ್. ಅಂಬೇಡ್ಕರ ನೀಡಿದ್ದು, ಅದರಲ್ಲಿ ಅಡಕವಾಗಿರುವ ಆಶಯ, ಅದರ ಹಿಂದೆ ಇರುವ ಸಮಾಜಿಕ ಕಳಕಳಿ, ಸಮಾನತೆ, ಭಾತೃತ್ವ ಸೇರಿದಂತೆ ಹತ್ತು ಹಲವಾರು ಮೌಲ್ಯಗಳನ್ನು ನಾವೆಲ್ಲರೂ ಅನುಸರಿಬೇಕು ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ನವನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯ ಶಾಸ್ತç ವಿಭಾಗದ ಮುಖ್ಯಸ್ಥ ಸಂಪತ್ ಲಮಾಣಿ ಮಾತನಾಡಿ ಪ್ರಜಾಪ್ರಭುತ್ವ ಒಂದು ಜೀವನದ ಶೈಲಿಯಾಗಿದೆ ಎಂದರು.
ಪ್ರಾರಂಭದಲ್ಲಿ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು. ಅನುಪಸ್ಥಿತಿಯಲ್ಲಿದ್ದ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಸಂದೇಶವನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಓದಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸವಿತಾ ಲೆಂಕನ್ನವರ, ಬುಡಾದ ಅಧ್ಯಕ್ಷ ರಜಾಕ್ ಬೇನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಮೇಶ ಚವ್ಹಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande