ಕೊಪ್ಪಳ, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ನಗರದಲ್ಲಿ ಬಿಡಾಡಿ ದನಗಳು ಹೆಚ್ಚಾಗಿರುವ ಪ್ರಯುಕ್ತ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದ್ದು, ಅವುಗಳ ನಿಯಂತ್ರಣಕ್ಕಾಗಿ ಸಂಬಂಧಿಸಿದ ದನ ಕರುಗಳ ಸಾಕಾಣಿಕೆ ಮಾಡುವವರಿಗೆ ನಗರಸಭೆ ಪೌರಾಯುಕ್ತರು ಸೂಚನೆ ನೀಡಿದ್ದಾರೆ.
ಕೊಪ್ಪಳ ನಗರದಲ್ಲಿರುವ ದನ ಕರುಗಳ ಸಾಕಾಣಿಕೆ ಮಾಡುವವರಿಗೆ ತಿಳಿಯಪಡಿಸುವುದೆನಂದರೆ, ಇತ್ತೀಚಿಗೆ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದನಗಳನ್ನು ರಸ್ತೆಗೆ ಬಿಡುತ್ತಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗಿರುತ್ತದೆ. ಬಿಡಾಡಿ ದನಗಳು ನಗರದ ತುಂಬೆಲ್ಲಾ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಬಿಡಾಡಿ ದನಗಳಿಂದ ಕೆಲವು ಪ್ರಮುಖ ತೊಂದರೆ ಉಂಟಾಗಿರುತ್ತವೆ.
ಕೊಪ್ಪಳ ನಗರದಲ್ಲಿ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮದ್ಯದಲ್ಲಿ ಬಿಡಾಡಿ ದನಗಳು ಮಲಗುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಇದರಿಂದ ರಸ್ತೆ ಅಪಘಾತಗಳು ಕೂಡಾ ಸಂಭವಿಸುತ್ತವೆ. ಬಿಡಾಡಿ ದನಗಳು ತರಕಾರಿ ಮಾರುಕಟ್ಟೆಗಳಲ್ಲಿ ತರಕಾರಿಗಳನ್ನು ತಿನ್ನುವ ನೂಕು-ನುಗ್ಗಲಿನಲ್ಲಿ ಮಾರುಕಟ್ಟೆಗೆ ಬಂದಿರುವ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುತ್ತದೆ. ಹಾಗೂ ತರಕಾರಿ ಮಾರಾಟಗಾರರಿಗೂ ಸಹ ತುಂಬಾ ತೊಂದರೆ ಉಂಟಾಗಿರುತ್ತದೆ. ಕೊಪ್ಪಳ ನಗರದ ವಿವಿಧ ಬಡಾವಣೆಗಳಲ್ಲಿ ಕಿರಿದಾದ ರಸ್ತೆಗಳಲ್ಲಿ ದನಗಳು ಗುದ್ದಾಡುತ್ತಾ ಓಡಿ ಬರುವುದರಿಂದ ಸಣ್ಣ ಪುಟ್ಟ ಮಕ್ಕಳಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಸಹ ಅಪಘಾತ ಉಂಟಾಗುತ್ತಿವೆ. ರಸ್ತೆ ಮದ್ಯದಲ್ಲಿ ಬಿಡಾಡಿ ದನಗಳು ಗುಂಪು ಗುಂಪಾಗಿ ನಿಲ್ಲುವುದರಿಂದ ಟ್ರಾಫಿಕ್ ಜಾಮ್ ಆಗಿ ಅಪಘಾತ ಉಂಟಾಗುತ್ತಿವೆ. ಮತ್ತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿವೆ.
ಆದಕಾರಣ ಸಂಬಂಧಪಟ್ಟ ದನಗಳ ಮಾಲೀಕರುಗಳು ಈ ಸಾರ್ವಜನಿಕ ಪ್ರಕಟಣೆ ಪ್ರಕಟಗೊಂಡ ಮೂರು ದಿನಗಳೊಳಗಾಗಿ ತಮ್ಮ ತಮ್ಮ ದನಕರುಗಳನ್ನು ತಮ್ಮ ಮನೆಯಲ್ಲಿ ಕಟ್ಟಿಹಾಕಿಕೊಂಡು ಸಾಕಬೇಕು. ಇಲ್ಲವೇ ದನಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ತಪ್ಪಿದಲ್ಲಿ ಬಿಡಾಡಿ ದನಗಳನ್ನು ನಗರಸಭೆ ವಶಕ್ಕೆ ಪಡೆದುಕೊಂಡು ಗೋಶಾಲೆಗೆ ಹಸ್ತಾಂತರಿಸಿ ಯಾರಾದರು ಮಾಲೀಕರು ತಮ್ಮದೇ ದನಗಳೆಂದು ನಗರಸಭೆ ಕಛೇರಿಗೆ ಬಂದಲ್ಲಿ ತಮ್ಮ ಮೇಲೆ ಕಾನೂನು ಕ್ರಮ ಹಾಗೂ ದಾವೆ ಹೂಡಲಾಗುವುದು ಜತೆಗೆ 1000 ರೂ. ದಂಡ ವಿಧಿಸಲಾಗುವುದು ಎಂದು ಕೊಪ್ಪಳ ನಗರಸಭೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್