ಬಳ್ಳಾರಿ, 13 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಹಾಸನದಲ್ಲಿ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆಯ ಮೇಲೆ ಲಾರಿ ಹರಿದು ಮೃತಪಟ್ಟ 9 ಜನರಲ್ಲಿ ಬಳ್ಳಾರಿ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರವೀಣ್ ಕುಮಾರ್ (21) ಅವರ ಮೃತ ದೇಹ ಬಳ್ಳಾರಿಯನ್ನು ತಲುಪಿದ್ದು, ತಾಯಿ ಮತ್ತು ಬಂಧುವರ್ಗದವರ ಆಕ್ರಂದನ ಮುಗಿಲು ಮುಟ್ಟಿದೆ.
ಬಳ್ಳಾರಿಯ ನಾಗಲಕೆರೆ ನಿವಾಸಿ ಪ್ರವೀಣ್ ಕುಮಾರ್, ಡಿಪ್ಲೊಮಾ ಅಭ್ಯಾಸ ಮಾಡಿ, ಲ್ಯಾಟರಲ್ ಎಂಟ್ರಿಯಲ್ಲಿ ಹಾಸನದಲ್ಲಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ವಿಭಾಗದ ಕೊನೆಯ ವರ್ಷದ ಎಂಜಿನಿಯರಿಂಗ್ ಅಭ್ಯಸಿಸುತ್ತಿದ್ದನು. ಮೃತ ಯುವಕನ ತಂದೆಯು ಬಾಲ್ಯದಲ್ಲಿಯೇ ಮೃತಪಟ್ಟಿದ್ದು, ತಾಯಿ ಸುಶೀಲಮ್ಮ ಅವರು ಖಾಸಗಿ ಆಸ್ಪತ್ರೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡು ಕಿತ್ತಿತಿನ್ನುವ ಬಡತನದಲ್ಲಿಯೇ ಮಗನಿಗೆ ಉನ್ನತ ಶಿಕ್ಷಣ ಕೊಡಿಸುತ್ತಿದ್ದಳು.
ದುರಾದೃಷ್ಟವಶಾಂತ್ ಹಾಸನದಲ್ಲಿ ನಡೆದ ಗಣೇಶನ ಮೂರ್ತಿ ವಿಸರ್ಜನೆಯ ಸಂದರ್ಭದಲ್ಲಿ ಲಾರಿಯು ಮೆರವಣಿಗೆಯ ಮೇಲೆ ಹರಿದ ಕಾರಣ ಹಲವರು ತೀವ್ರವಾಗಿ ಗಾಯಗೊಂಡಿದ್ದು. ಗಾಯಗೊಂಡವರಲ್ಲಿ ಬಳ್ಳಾರಿಯ ಪ್ರವೀಣ್ ಕುಮಾರ್ ಸೇರಿದ್ದು, ಚಿಕಿತ್ಸೆ ಫಲ ನೀಡದೇ ಮೃತಪಟ್ಟಿದ್ದಾನೆ.
ಮೃತನ ದೇಹವು ಮನೆಯನ್ನು ತಲುಪಿದ್ದು ಪ್ರವೀಣ ಕುಮಾರ್‍ನ ತಾಯಿ - ಅಜ್ಜಿ ಮತ್ತು ಸಂಬಂಧಿಕರು, ಮನೆಗೆ ಆಶಾಕಿರಣವಾಗಬೇಕಿದ್ದ ಮಗನು ಚಿರನಿದ್ರೆಗೆ ಜಾರಿರುವ ದುರಂತದಿಂದ ಆಘಾತಕ್ಕೆ ಒಳಗಾಗಿರುವುದು ಕರಳು ಹಿಂಡುತ್ತಿತ್ತು.
ಶೋಕ : ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಮೃತ ಪ್ರವೀಣ ಕುಮಾರ್ ಅವರ ಮನೆಗೆ ಶನಿವಾರ ಭೇಟಿ ನೀಡಿ, ಮೃತನ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿ, ಅಂತಿಮ ನಮನಗಳನ್ನು ಸಲ್ಲಿಸಿದರು. ಅಲ್ಲದೇ, ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್