ವಾರಾಣಸಿ, 13 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಹಿಂದೂಸ್ತಾನ್ ಸಮಾಚಾರ ಸುದ್ದಿ ಸಂಸ್ಥೆ ಆಯೋಜಿಸಿದ್ದ ಭಾರತೀಯ ಭಾಷಾ ಸಂಗಮ – 2025 ಸಮಾರಂಭದಲ್ಲಿ ದೇಶದ ಸಾಂಸ್ಕೃತಿಕ ವೈವಿಧ್ಯತೆ, ಭಾಷಾ ಪರಂಪರೆ ಹಾಗೂ ಏಕತೆಯ ಸಂದೇಶ ಪ್ರತಿಧ್ವನಿಸಿತು.
ಕಾಶಿಯ ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದ ಗಾಂಧಿ ಅಧ್ಯಯನ ಪೀಠ ಸಭಾಂಗಣದಲ್ಲಿ ಶನಿವಾರ ನಡೆದ ಈ ಕಾರ್ಯಕ್ರಮದ ವಿಷಯ “ಪಂಚ ಪ್ರಾಣ : ಸ್ವಭಾಷೆ ಮತ್ತು ಅಭಿವೃದ್ಧಿ ಹೊಂದಿದ ಭಾರತ” ಆಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಮ್ಮು-ಕಾಶ್ಮೀರದ ಉಪರಾಜ್ಯಪಾಲ ಮನೋಜ್ ಸಿನ್ಹಾ ಅವರು ಭಾಷೆ ಕೇವಲ ಸಂವಹನದ ಸಾಧನ ಮಾತ್ರವಲ್ಲ, ಅದು ನಮ್ಮ ಸಾಂಸ್ಕೃತಿಕ ಚೇತನದ ಆತ್ಮವಾಗಿದೆಯೆಂದು ಹೇಳಿದರು.
“ಭಾರತೀಯ ಭಾಷೆಗಳು ದೇಶದ ಏಕತೆಯ ಬಲಿಷ್ಠ ಕೊಂಡಿ. ವಿಭಿನ್ನತೆಯಲ್ಲಿಯೇ ಏಕತೆ ಎಂಬ ಭಾವನೆ ಭಾರತೀಯ ಭಾಷೆಗಳ ಮೂಲಕ ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೀಡಿರುವ ಪಂಚ ಪ್ರಾಣ ಸಂಕಲ್ಪದಲ್ಲಿ ಸ್ವಭಾಷೆಯ ಪ್ರಾಮುಖ್ಯತೆಯಿದೆ. ನಮ್ಮ ಮಾತೃಭಾಷೆಗಳಲ್ಲಿ ಶಿಕ್ಷಣ, ಆಡಳಿತ ನಡೆಯುವಂತೆ ಮಾಡಿದಾಗ ಮಾತ್ರ ಭಾರತ ಆತ್ಮನಿರ್ಭರ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಸಿನ್ಹಾ ಅಭಿಪ್ರಾಯಪಟ್ಟರು.
ಭಾರತೀಯ ಮೌಲ್ಯಗಳ ಅಗತ್ಯ : ನೀಲಕಂಠ ತಿವಾರಿ
ವಾರಾಣಸಿ ದಕ್ಷಿಣ ಕ್ಷೇತ್ರದ ಶಾಸಕರಾದ ನೀಲಕಂಠ ತಿವಾರಿ ಅವರು ಸ್ವಾತಂತ್ರ್ಯದ ನಂತರ ಭಾರತ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ, ನಿಜವಾದ ಸಾಂಸ್ಕೃತಿಕ ಮೌಲ್ಯಗಳು ವಿದ್ಯಾರ್ಥಿಗಳಿಗೆ ತಲುಪುವಲ್ಲಿ ಕೊರತೆಯಿದೆ ಎಂದು ವಿಷಾದ ವ್ಯಕ್ತಪಡಿಸಿದರು. “ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಮೂಲ್ಯಗಳನ್ನು ಪ್ರತಿಷ್ಠಾಪಿಸುವುದು ಇಂದಿನ ಪ್ರಮುಖ ಅವಶ್ಯಕತೆ” ಎಂದು ಅವರು ಒತ್ತಿ ಹೇಳಿದರು.
ಮಾತೃಭಾಷೆಯೇ ಪರ್ಯಾಯವಿಲ್ಲ : ಅತುಲ್‌ಭಾಯಿ ಕೋಠಾರಿ
ಆರ್‌ಎಸ್‌ಎಸ್ ಹಿರಿಯ ಪ್ರಚಾರಕರೂ, ಶಿಕ್ಷಣ ಸಂಸ್ಕೃತಿ ಉತ್ತಾನ ನಿಯಾಸ್‌ನ ರಾಷ್ಟ್ರೀಯ ಕಾರ್ಯದರ್ಶಿಗಳೂ ಆದ ಅತುಲ್‌ಭಾಯಿ ಕೋಠಾರಿ ಅವರು ಮಾತೃಭೂಮಿ ಮತ್ತು ಮಾತೃಭಾಷೆಗೆ ಯಾವ ಪರ್ಯಾಯವೂ ಇಲ್ಲ ಎಂದು ಹೇಳಿದರು. “ಭಾಷೆಯ ಮೂಲಕ ವಿಜ್ಞಾನ, ತಂತ್ರಜ್ಞಾನ ಮತ್ತು ಸಾಹಿತ್ಯದ ಪ್ರಚಾರ ಮಾತ್ರವಲ್ಲ, ಸಮಾಜದ ಏಕತೆಯೂ ಬಲವಾಗುತ್ತದೆ” ಎಂದು ಅವರು ತಿಳಿಸಿದರು.
ಸ್ವಾತಂತ್ರ್ಯ ಹೋರಾಟ ಮತ್ತು ಸಮಾಜ ಸುಧಾರಣಾ ಚಳುವಳಿಗಳಲ್ಲಿ ಭಾರತೀಯ ಭಾಷೆಗಳ ಪಾತ್ರವನ್ನು ಅವರು ವಿಶೇಷವಾಗಿ ಸ್ಮರಿಸಿದರು.
ಮಾತೃಭಾಷೆಯಲ್ಲಿ ಶಿಕ್ಷಣವೇ ವಿಶ್ವಗುರುವಿನ ದಾರಿ : ಕುಲಪತಿಗಳು
ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದ ಕುಲಪತಿ ಪ್ರೊ. ಆನಂದ್ ಕುಮಾರ್ ತ್ಯಾಗಿ ಅವರು ಭಾರತ ವಿಶ್ವಗುರುವಾಗದಿರುವುದಕ್ಕೆ ಪ್ರಮುಖ ಕಾರಣ ಮಾತೃಭಾಷೆಯಲ್ಲಿ ಶಿಕ್ಷಣ ನೀಡದಿರುವುದಾಗಿದೆ ಎಂದು ಹೇಳಿದರು. “ಮಾತೃಭಾಷೆಯಲ್ಲಿ ಜ್ಞಾನ, ಮೌಲ್ಯ ಮತ್ತು ಕೌಶಲ್ಯಗಳನ್ನು ಒಟ್ಟಿಗೆ ನೀಡಿದಾಗಲೇ ಭಾರತ ಮತ್ತೊಮ್ಮೆ ವಿಶ್ವಗುರುವಿನ ಸ್ಥಾನಕ್ಕೇರಲಿದೆ” ಎಂದು ಅಭಿಪ್ರಾಯಪಟ್ಟರು.
ಹೊಸ ಶಿಕ್ಷಣ ನೀತಿ ‘ಸ್ವ’ ಬೋಧಿಸುವುದು : ಬಿ.ಹೆಚ್.ಯು ಕುಲಪತಿ
ಕಾಶಿ ಹಿಂದೂ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಜೀತ್ ಕುಮಾರ್ ಚತುರ್ವೇದಿ ಅವರು ಹೊಸ ಶಿಕ್ಷಣ ನೀತಿ ಭವಿಷ್ಯದ ಪೀಳಿಗೆಯವರಿಗೆ ಸ್ವದೇಶಾಭಿಮಾನ ಮತ್ತು ಸ್ವ-ಪರಿಚಯವನ್ನು ಬೋಧಿಸುವ ಮಹತ್ವದ ಕಾರ್ಯ ಮಾಡಲಿದೆ ಎಂದು ಹೇಳಿದರು. ಭಾರತೀಯ ಭಾಷೆಗಳ ಅಭಿವೃದ್ಧಿಯೊಂದಿಗೆ ರಾಷ್ಟ್ರೀಯ ಏಕತೆ ಬಲವಾಗಲಿದೆ ಎಂದೂ ಅವರು ಅಭಿಪ್ರಾಯಪಟ್ಟರು.
22 ಭಾಷೆಗಳ ಪಂಡಿತರಿಗೆ ಗೌರವ
ಈ ಸಂದರ್ಭದಲ್ಲಿ ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಗುಜರಾತಿ, ಬಂಗಾಳಿ, ಸಂಸ್ಕೃತ, ಒಡಿಯಾ, ಅಸ್ಸಾಮಿ, ಪಂಜಾಬಿ, ನೇಪಾಳಿ, ಸಿಂಧಿ, ಮೈಥಿಲಿ, ತಿಬೇಟಿಯನ್ ಸೇರಿದಂತೆ ಒಟ್ಟು 22 ಭಾರತೀಯ ಭಾಷೆಗಳ ಪಂಡಿತರಿಗೆ ಭಾರತೀಯ ಭಾಷಾ ಗೌರವ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಹಿಂದೂಸ್ತಾನ್ ಸಮಾಚಾರ ಸುದ್ದಿ ಸಂಸ್ಥೆ ಅಧ್ಯಕ್ಷ ಅರವಿಂದ ಭಾಲಚಂದ್ರ ಮರ್ಡೀಕರ ವಹಿಸಿದ್ದರು. ಸಂಪಾದಕ ಜಿತೇಂದ್ರ ತಿವಾರಿ ಕಾರ್ಯಕ್ರಮವನ್ನು ನಿರ್ವಹಿಸಿದರು. ನಿರ್ದೇಶಕ ಪ್ರದೀಪ್ ಮಧೋಕ್ ‘ಬಾಬಾ’ ಅತಿಥಿಗಳಿಗೆ ಸ್ವಾಗತ ಕೋರಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa