ಬಳ್ಳಾರಿ, 13 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಟ್ಟು 31 ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ಸುಸೂತ್ರವಾಗಿ ನಡೆದಿದ್ದು, ಅನೇಕ ಪ್ರಕರಣಗಳು ಇತ್ಯರ್ಥವಾಗಿವೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಕೆ.ಜಿ. ಶಾಂತಿ ಅವರು, ಖುದ್ದಾಗಿ ಪ್ರಕರಣಗಳ ವಿಲೇವಾರಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ನಗರದ ತಾಳೂರು ರಸ್ತೆಯ ಜಿಲ್ಲಾ ನ್ಯಾಯಾಲಯದಲ್ಲಿರುವ
ಎಲ್ಲಾ ನ್ಯಾಯಾಲಯಗಳಲ್ಲಿ ನಡೆದ ಲೋಕ್-ಅದಾಲತ್‍ಗಳನ್ನು ವೀಕ್ಷಿಸಿದರು.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ನ್ಯಾಯಾಧೀಶೆ ಕೆ.ಜಿ. ಶಾಂತಿ ಅವರು, ಸಾರ್ವಜನಿಕರು-ಕಕ್ಷಿದಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿಕೊಳ್ಳುವುದು ಉತ್ತಮ ಎಂದರು.
ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಲೋಕ್-ಅದಾಲತ್‍ನಲ್ಲಿ ಗಂಡ-ಹೆಂಡತಿ ಪ್ರಕರಣ ಇತ್ಯರ್ಥದ ಸಂದರ್ಭದಲ್ಲಿ ಪರಸ್ಪರ ನಂಬಿಕೆ ಹಾಗೂ ವಿಶ್ವಾಸದಿಂದ ಇದ್ದಾಗ ಒಳ್ಳೆಯ ಜೀವನ ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾಜದಲ್ಲಿ ಕುಟುಂಬ ಮತ್ತು ಆಸ್ತಿ ಕಲಹಗಳಿಂದ ಅಶಾಂತಿ ಉಂಟಾಗಿದ್ದು, ದ್ವೇಷ ಸಾಧಿಸದೆ ನಾನು ಎಂಬುದನ್ನು ಬಿಟ್ಟು ನಾವು ಎಂದು ಬದುಕಿದರೆ ನೆಮ್ಮದಿಯ ಜೀವನವನ್ನು ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ರಾಜೇಶ್ ಎನ್.ಹೊಸಮನೆ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್