ಹುಬ್ಬಳ್ಳಿ, 13 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜನಗಣತಿ ವಿವಾದದ ನಡುವೆಯೇ ವೀರಶೈವ-ಲಿಂಗಾಯತ ಸಮುದಾಯದೊಳಗಿನ ಭಿನ್ನಾಭಿಪ್ರಾಯಕ್ಕೆ ಮತ್ತೊಂದು ತಿರುವು ದೊರೆತಿದೆ. ಧಾರವಾಡದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಸಾಣೇಹಳ್ಳಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ, “ನಾನು ಮಠದ ಸಂಪ್ರದಾಯದಂತೆ ಬಟ್ಟೆ ಧರಿಸಿದ್ದೇನೆ. ಕಾವಿ ಬಿಟ್ಟು ಬಿಳಿ ಬಟ್ಟೆ ತೊಟ್ಟಿರುವುದು ಗೋಸುಂಬೆ ಎಂದು ಕರೆದಿರುವುದು ಅಸಂಬದ್ದ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನಮ್ಮ ಶಿರಹಟ್ಟಿ ಮಠದಲ್ಲಿ ಐದು ಬಗೆಯ ಬಟ್ಟೆ ಧರಿಸುವ ಸಂಪ್ರದಾಯವಿದೆ. ನಾನು ಸ್ವಂತ ಇಚ್ಛೆಯಿಂದ ಬಟ್ಟೆ ಬದಲಾಯಿಸಿಲ್ಲ. ರಾಷ್ಟ್ರಧ್ವಜದ ಸಂಕೇತವಾದ ಕೇಸರಿ ಪೇಟ, ಬಿಳಿ ಬಟ್ಟೆ ಮತ್ತು ಹಸಿರು ಶಾಲು ಧರಿಸಿರುವೆನು. ಸಾಣೇಹಳ್ಳಿ ಶ್ರೀಗಳ ಹೇಳಿಕೆ ಬೇಸರ ತಂದಿದೆ” ಎಂದರು.
ಸಿರಿಗೆರೆ ಪೀಠದ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ತಾವು ಮೂಲಸಿದ್ಧಾಂತದಿಂದ ತಪ್ಪಿ ನಡೆಯಬಾರದು. ಇತ್ತೀಚೆಗೆ ತಾವು ಜಂಗಮರನ್ನು ಅವಿವೇಕಿಗಳು ಎಂದು ಕರೆದಿರುವುದು ಅಸಮಂಜಸ. ಬಸವಣ್ಣನವರು ಯಾವ ವಚನದಲ್ಲಿಯೂ ಜಾತಿ ನಿಂದನೆ ಮಾಡಿಲ್ಲ. ತಮ್ಮ ಪೀಠದಲ್ಲಿ ಮುಂದಿನ ಪೀಠಾಧಿಪತಿಯಾಗಿ ಯಾವ ಜಾತಿಯ ವಟುವನ್ನು ನೇಮಿಸುತ್ತೀರಿ ಎಂಬುದನ್ನು ಬಹಿರಂಗಗೊಳಿಸಬೇಕು” ಎಂದು ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa