ಬಳ್ಳಾರಿ, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭವಿಷ್ಯದ ಚುನಾವಣೆಗಳಿಗೆ ಪೂರಕವಾಗಿ ಕಾಂಗ್ರೆಸ್ ಪ್ರಚಾರ ಸಮಿತಿಯನ್ನು ಕರ್ನಾಟಕ ರಾಜ್ಯಾದ್ಯಂತ ಪ್ರವಾಸ ಮಾಡಿ ಬಲಪಡಿಸಲಾಗುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಅವರು ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ 22 ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಸ ಮಾಡಲಾಗಿದೆ. ಪ್ರತಿ ವಾರ್ಡ್, ಗ್ರಾಮ ಮತ್ತು ಪ್ರತಿ ಹಂತದಲ್ಲಿಯೂ ರಾಜ್ಯ ಮಟ್ಟದ ವರೆಗೂ 23 ಸದಸ್ಯರ ಪ್ರಚಾರ ಸಮಿತಿಯನ್ನು ಬಲಪಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕುವಾರು ಪ್ರಚಾರ ಸಮಿತಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದರು.
ಅಲ್ಲದೇ, ಪ್ರತೀ ಸಮಿತಿಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ಪ್ರಭಾವ ಹೆಚ್ಚಿಸಲಿಕ್ಕಾಗಿಯೇ ಇಬ್ಬರನ್ನು ನೇಮಕ ಮಾಡಿಕೊಳ್ಳಲು ಪಕ್ಷ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದ ಬಳಕೆಯನ್ನು ಹೆಚ್ಚಿಸಲು ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ಮಹದೇವಪುರದಲ್ಲಿ ನಡೆದಿರುವ `ಮತಗಳ್ಳತನ'ದ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕೆಪಿಸಿಸಿ ಪ್ರಚಾರ ಸಮಿತಿಯು ಎಲ್ಲಾ ಹಂತಗಳಲ್ಲಿಯೂ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಜನಪರ - ಜನಪ್ರಿಯ ಯೋಜನೆಗಳನ್ನು - ವಿರೋಧ ಪಕ್ಷದ ವೈಫಲ್ಯಗಳು - ಜನವಿರೋಧಿ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಯತ್ನಿಸುತ್ತದೆ ಎಂದರು.
ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್, ಕೆಪಿಸಿಸಿಯ ಮಂಜುನಾಥ್, ಆನಂದ ಕುಮಾರ್, ಮುಖಂಡರಾದ ಮುಂಡ್ರಗಿ ನಾಗರಾಜ್, ವೆಂಕಟೇಶ್ ಹೆಗಡೆ, ನಾಗಭೂಷಣ್, ತಿಮ್ಮನಗೌಡ, ಹುಮಾಯೂನ್ ಖಾನ್ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್