ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಶ್ವವಿಖ್ಯಾತ ಮೈಸೂರು ದಸರಾ-2025 ಉದ್ಘಾಟನೆಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ನಿಗದಿಪಡಿಸಬೇಕೆಂಬ ಮನವಿಯನ್ನು ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ.
ನ್ಯಾಯಾಲಯದ ಕಲಾಪ ಆರಂಭವಾದ ಕೂಡಲೇ ಅರ್ಜಿದಾರರ ಪರ ವಕೀಲರು, ಈ ಪ್ರಕರಣ ಗಂಭೀರ ಸ್ವರೂಪದ್ದಾಗಿದೆ ಮತ್ತು ದಸರಾ ಮಹೋತ್ಸವ ಇದೇ 22ರಂದು ನಡೆಯಲಿದೆ ಎಂಬ ಕಾರಣ ನೀಡಿ, ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ವಿಭು ಖಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಷಿ ಅವರಿದ್ದ ಪೀಠ, ಅರ್ಜಿಯನ್ನು ನಿನ್ನೆ ಸಲ್ಲಿಸಲಾಗಿದೆ. ತುರ್ತು ವಿಚಾರಣೆಗೆ ನಿಗದಿಪಡಿಸಬೇಕಾದ ಅಗತ್ಯವಿಲ್ಲ. ಸಾಮಾನ್ಯ ಪ್ರಕ್ರಿಯೆಯಂತೆ ಅರ್ಜಿಯನ್ನು ನಾಲ್ಕು ದಿನಗಳಲ್ಲಿ ವಿಚಾರಣೆಗೆ ನಿಗದಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೊದಲಿಗೆ ಈ ಸಂಬಂಧ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯ ನಂತರ, ಬೆಂಗಳೂರಿನ ಹೆಚ್.ಎಸ್. ಗೌರವ್, ಉದ್ಯಮಿ ಟಿ. ಗಿರೀಶ್ ಕುಮಾರ್ ಹಾಗೂ ಅಭಿನವ ಭಾರತ್ ಪಾರ್ಟಿಯ ರಾಷ್ಟ್ರೀಯ ಉಪಾಧ್ಯಕ್ಷೆ ಆರ್. ಸೌಮ್ಯ ಅವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa