ರಾಯಚೂರು, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ನಗರದ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ (ಓಪೆಕ್) ಗೌರವಾನ್ವಿತ ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶರು ಆಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಎ.ಸಾತ್ವಿಕ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಧ್ಯಾಹ್ನ 12.45ರ ಸುಮಾರಿಗೆ ಆಸ್ಪತ್ರೆಗೆ ಪ್ರವೇಶಿಸಿದ ನ್ಯಾಯಾಧೀಶರು, ಆಸ್ಪತ್ರೆಯಲ್ಲಿನ ರೋಗಿಗಳು ಮತ್ತು ಅವರ ಕುಟುಂಬದವರ ಜೊತೆ ಮಾತನಾಡಿ ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು. ಆಸ್ಪತ್ರೆಯ ಪ್ರವೇಶದ ವೇಳೆ, ಆಸ್ಪತ್ರೆಯ ಹೊರಾಂಗಣದಲ್ಲಿ ಕುಳಿತಿದ್ದ ರೋಗಿಯೊಬ್ಬರನ್ನು ನ್ಯಾಯಾಧೀಶರು ಮಾತನಾಡಿಸಿದರು. ಆಸ್ಪತ್ರೆಯ ಬಾಗಿಲು ಬಳಿ ಮಲಗಿದ್ದ ಮಹಿಳಾ ರೋಗಿಯೊಬ್ಬರಿಗೆ ವಿಚಾರಿಸಿದಾಗ, ವೈದ್ಯರಿಗಾಗಿ ಕಾಯುತ್ತಿರುವುದು ತಿಳಿಯಿತು. ಈ ರೀತಿ ರೋಗಿಗಳು ವೈದ್ಯರಿಗಾಗಿ ಕಾಯುವುದು ಆಸ್ಪತ್ರೆಯಲ್ಲಿ ತಪ್ಪಬೇಕು.
ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ಈ ವಿಷಯ ತಿಳಿಸಿ ಸರಿಪಡಿಸಿಕೊಳ್ಳಲು ನ್ಯಾಯಾಧೀಶರು ಸೂಚನೆ ನೀಡಿದರು.
ಯುರೋಲಾಜಿ ವಿಭಾಗ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಸಂಚರಿಸಿದ ನ್ಯಾಯಾಧೀಶರು, ಅಲ್ಲಿ ದಾಖಲಾಗಿದ್ದ ರೋಗಿಗಳೊಂದಿಗೆ ಮಾತನಾಡಿದರು. ಆಸ್ಪತ್ರೆಯಲ್ಲಿ ಸಿಗುವ ವಿವಿಧ ಚಿಕಿತ್ಸೆ ಹಾಗೂ ಊಟದ ವ್ಯವಸ್ಥೆ ಕುರಿತು ರೋಗಿಗಳಿಂದ ಮಾಹಿತಿ ಪಡೆದರು.
ನ್ಯೂರೋ, ಐಸಿಯು ಹಾಗೂ ನೆಪ್ರಾಲಜಿ ವಿಭಾಗದಲ್ಲಿದ್ದ ರೋಗಿಗಳನ್ನು ಸಹ ನ್ಯಾಯಾಧೀಶರು ಮಾತನಾಡಿಸಿದರು. ಆಸ್ಪತ್ರೆಯಲ್ಲಿ ಉತ್ತಮ ರೀತಿಯ ಚಿಕಿತ್ಸೆ ಸಿಗುತ್ತಿದೆ ಎಂದು ಅಲ್ಲಿದ್ದ ರೋಗಿಗಳು ತಿಳಿಸಿದಾಗ, ಉತ್ತಮವಾಗಿ ಕೆಲಸ ಮಾಡುವ ವೈದ್ಯರ ಕಾರ್ಯವೈಖರಿಯ ಬಗ್ಗೆ ನ್ಯಾಯಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ, ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿದ ನ್ಯಾಯಾಧೀಶರು, ರೋಗಿಗಳಿಗೆ ಹೊರಗಡೆ ಔಷಧಿ ಬರೆಯದೆ, ಆಸ್ಪತ್ರೆಯಲ್ಲಿ ಸಿಗುವ ಉತ್ತಮ ಗುಣಮಟ್ಟದ ಔಷಧಿ ನೀಡಬೇಕು. ಔಷಧಿಗಳ ವಿತರಣೆ ವೇಳೆ ರೋಗಿಗಳಿಂದ ಯಾವುದೇ ಕಾರಣಕ್ಕೂ ಹಣ ಪಡೆಯಬಾರದು. ಆಸ್ಪತ್ರೆಗೆ ಬರುವ ಬಹುತೇಕ ಜನರು ಬಡವರಾಗಿದ್ದು, ಅವರಿಗೆ ಉತ್ತಮ ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯವಾಗಿದೆ. ಅದನ್ನು ಅರಿತು ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಎಲ್ಲಾ ವೈದ್ಯರು ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಆಗಮಿಸಬೇಕು. ಸಮಯಕ್ಕೆ ಸರಿಯಾಗಿ ಬಾರದ ವೈದ್ಯರ ವಿರುದ್ಧ ಕ್ರಮಜರುಗಿಸಬೇಕೆಂದು ಆಸ್ಪತ್ರೆಯ ವಿಶೇμÁಧಿಕಾರಿಗಳಿಗೆ ಸೂಚನೆ ನೀಡಿದರು.
ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ, ಉಪಚಾರ ಮತ್ತು ಔಷಧೋಪಚಾರವನ್ನು ಸಮರ್ಪಕವಾಗಿ ನೀಡುವಂತೆ ಸಂಬಂಧಿಸಿದ ವೈದ್ಯರಿಗೆ ನಿರ್ದೇಶನ ನೀಡಲಾಯಿತು.
ಇದೇ ಸಂದರ್ಭದಲ್ಲಿ ಓಪೆಕ್ ಆಸ್ಪತ್ರೆಯ ವಿಶೇಷಾಧಿಕಾರಿ ಡಾ.ರಮೇಶ ಸಾಗರ್, ಆಸ್ಪತ್ರೆಯ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಪ್ರಸಾದ್, ಡಾ.ವಿನಿತು, ಡಾ.ವಿನಯ್ ಬದ್ರಿ, ಡಾ.ಮಂಜುನಾಥ, ಡಾ.ಶೈಲೇಶ್, ಡಾ.ರಾಘವೇಂದ್ರ, ಡಾ.ವಿಜಯ ಮಹಾಂತೇಶ್, ಡಾ.ಅನಿಲ್ ಗೋಪಿನಾಥ್, ಡಾ.ಸುರೇಶ್ ಸಾಗರ ಸೇರಿದಂತೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್