ಬಳ್ಳಾರಿ, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರದ ಮುಂಡ್ರಿಗಿ ಬಳಿಯ ಬಹು ನಿರೀಕ್ಷಿತ `ರಾಜೀವ್‍ಗಾಂಧಿ ಟೌನ್‍ಶಿಪ್' ಯೋಜನೆಯ ಅಡಿಯಲ್ಲಿ ಶೀಘ್ರದಲ್ಲೇ ಪೂರ್ಣಗೊಳ್ಳಲಿರುವ 1000 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲೇ ವಿತರಣೆ ಮಾಡಲಾಗುವುದು ಎಂದು ಶಾಸಕ ನಾರಾ ಭರತರೆಡ್ಡಿ ಅವರು ತಿಳಿಸಿದ್ದಾರೆ.
ಸುದ್ದಿಗಾರರಿಗೆ ಗುರುವಾರ ಈ ಮಾಹಿತಿ ನೀಡಿರುವ ಅವರು, ಮುಂಡ್ರಿಗಿ ಗ್ರಾಮದ ಬಳಿಯ ನಿರ್ಮಾಣವಾಗುತ್ತಿರುವ
`ರಾಜೀವ್‍ಗಾಂಧಿ ಟೌನ್‍ಶಿಪ್' ವಸತಿ ಸಮುಚ್ಛಯಕ್ಕೆ ಗುರುವಾರ ಭೇಟಿ ನೀಡಿ ಅಧಿಕಾರಿಗಳ ಜೊತೆಯಲ್ಲಿ ಸ್ಥಳದಲ್ಲಿಯೇ ಸಭೆ ನಡೆಸಿ, ಪೂರ್ಣಗೊಂಡಿರುವ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಅಗತ್ಯ ಕ್ರಮಕೈಗೊಳ್ಳಲು ನಿರ್ದೇಶನಗಳನ್ನು ನೀಡಿದರು.
ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತ ಮಂಜುನಾಥ ಸೇರಿ ವಸತಿ ವಿಭಾಗದ ಅಧಿಕಾರಿಗಳು `ರಾಜೀವ್‍ಗಾಂಧಿ ಟೌನ್‍ಶಿಪ್'ನ ಪ್ರಗತಿಯ ಕುರಿತು ಶಾಸಕರಿಗೆ ಮಾಹಿತಿ ನೀಡಿದಾಗ, ನಾರಾ ಭರತರೆಡ್ಡಿ ಅವರು, ಫಲಾನುಭವಿಗಳಿಗೆ ಉಚಿತವಾಗಿ ಮನೆಯನ್ನು ಹಂಚುವ ಚಿಂತನೆ ಇದೆ. ಈ ಕುರಿತು ವಸತಿ ಸಚಿವ ಜಮೀರ್ ಅಹ್ಮದ್ ಅವರ ಜೊತೆಯಲ್ಲಿ ಚರ್ಚೆ ಮಾಡುವೆ. ಶೀಘ್ರದಲ್ಲಿಯೇ ಮನೆಗಳನ್ನು ಹಂಚಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿರಿ ಎಂದು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಚಾನಾಳ್ ಶೇಖರ್ ಇನ್ನಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್