ಗದಗ, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮ ಶೋಕಸಾಗರದಲ್ಲಿ ತೇಲುತ್ತಿದೆ. ಗ್ರಾಮದ ವೀರಯೋಧ ಮಂಜುನಾಥ ಗಿಡ್ಡಮಲ್ಲನವರ (35) ಕರ್ತವ್ಯ ನಿರತವಾಗಿದ್ದ ವೇಳೆ ವಿದ್ಯುತ್ ಸ್ಪರ್ಶಗೊಂಡು ಹುತಾತ್ಮರಾದ ದುರ್ಘಟನೆ ಪಂಜಾಬಿನ ಜಲಂಧರ್‌ನಲ್ಲಿ ಸೆಪ್ಟೆಂಬರ್ 9ರಂದು ನಡೆದಿದೆ.
ಮಂಜುನಾಥರು ಕಳೆದ 13 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಜಲಂಧರ್‌ನ ಎಎಸ್‌ಸಿ ಸೆಂಟರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಪತ್ನಿ ಹಾಗೂ ಮಗು ಸಮೇತ ಸೇನಾ ವಸತಿ ಗೃಹದಲ್ಲೇ ವಾಸವಾಗಿದ್ದರು. ದೈನಂದಿನ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಗೊಂಡು ತೀವ್ರ ಗಾಯಗೊಂಡ ಅವರು ತಕ್ಷಣವೇ ಸೇನಾ ಆಸ್ಪತ್ರೆಗೆ ಸಾಗಿಸಲ್ಪಟ್ಟರು. ವೈದ್ಯರು ಶ್ರದ್ಧೆಯಿಂದ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ವೀರಮರಣ ಹೊಂದಿದರು.
ಈ ಸುದ್ದಿ ಹರಿದಾಡುತ್ತಿದ್ದಂತೆಯೇ ಹಿರೇಕೊಪ್ಪ ಗ್ರಾಮವಾಸಿಗಳು ದುಃಖದಲ್ಲಿ ಮುಳುಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಗ್ರಾಮದಲ್ಲಿ ಎಲ್ಲೆಡೆ ನೀರವ ಮೌನ ಆವರಿಸಿತು.
ಇಂದು ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಿದಾಗ ಕುಟುಂಬಸ್ಥರು, ಬಂಧುಬಳಗ ಹಾಗೂ ಗ್ರಾಮಸ್ಥರು ಕಣ್ಣೀರಿನಿಂದ ಬರಮಾಡಿಕೊಂಡರು. ಹಿರೇಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಜನರು ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು, ಮಾಜಿ ಸೈನಿಕರು, ಶಾಲಾ ಮಕ್ಕಳು ಹಾಗೂ ಸೇನಾ ಸಿಬ್ಬಂದಿ ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡು ಗೌರವ ಸಲ್ಲಿಸಿದರು.
ಮಂಜುನಾಥರಂತಹ ಧೀರ ಸೈನಿಕರ ತ್ಯಾಗ ದೇಶಕ್ಕೆ ಹೆಮ್ಮೆ ತಂದರೂ, ಅವರ ಅಗಲಿಕೆಯಿಂದ ಗ್ರಾಮ ದುಃಖದಲ್ಲಿ ಮುಳುಗಿದೆ. “ಅಮರ್ ರಹೇ… ಭಾರತ ಮಾತೆಯ ಪುತ್ರನಿಗೆ ಜಯಘೋಷ”ಗಳು ಹಿರೇಕೊಪ್ಪದಲ್ಲಿ ಮೊಳಗಿದವು.
ಹಿಂದೂಸ್ತಾನ್ ಸಮಾಚಾರ್ / lalita MP