ಬಡ್ಡಿ ಸಮೇತ ಪರಿಹಾರ ಪಾವತಿಸುವಂತೆ ನ್ಯೂ ಇಂಡಿಯಾ ಅಶ್ಯೂರನ್ಸ್ ಕಂಪನಿ ಲಿ. ಗೆ ಆದೇಶ
ಕೊಪ್ಪಳ , 11 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ದೂರುದಾರರ ಅಪಘಾತಕ್ಕೀಡಾದ ವಾಹನದ ನಷ್ಟ ಪರಿಹಾರವನ್ನು ನೀಡಲು ನಿರಾಕರಿಸಿ, ಸೇವಾ ನ್ಯೂನ್ಯತೆ ಎಸಗಿದ ಹುಬ್ಬಳ್ಳಿಯ ನ್ಯೂ ಇಂಡಿಯಾ ಅಶ್ಯೂರನ್ಸ್ ಕಂಪನಿ ಲಿ. ಗೆ ನಷ್ಟ ಪರಿಹಾರ ಮೊತ್ತವನ್ನು ಬಡ್ಡಿ ಸಮೇತ ಪಾವತಿಸುವಂತೆ ಆದೇಶಿಸಿ ಜಿಲ್ಲಾ ಗ್ರಾಹಕರ ವ್ಯಾ
ಬಡ್ಡಿ ಸಮೇತ ಪರಿಹಾರ ಪಾವತಿಸುವಂತೆ ನ್ಯೂ ಇಂಡಿಯಾ ಅಶ್ಯೂರನ್ಸ್ ಕಂಪನಿ ಲಿ. ಗೆ  ಆದೇಶ


ಕೊಪ್ಪಳ , 11 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ದೂರುದಾರರ ಅಪಘಾತಕ್ಕೀಡಾದ ವಾಹನದ ನಷ್ಟ ಪರಿಹಾರವನ್ನು ನೀಡಲು ನಿರಾಕರಿಸಿ, ಸೇವಾ ನ್ಯೂನ್ಯತೆ ಎಸಗಿದ ಹುಬ್ಬಳ್ಳಿಯ ನ್ಯೂ ಇಂಡಿಯಾ ಅಶ್ಯೂರನ್ಸ್ ಕಂಪನಿ ಲಿ. ಗೆ ನಷ್ಟ ಪರಿಹಾರ ಮೊತ್ತವನ್ನು ಬಡ್ಡಿ ಸಮೇತ ಪಾವತಿಸುವಂತೆ ಆದೇಶಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ಪ್ರಕಟಿಸಿದೆ.

ದೂರುದಾರರಾದ ಮೊಹಮ್ಮದ ಅಲಿ ತಂ. ಹಸನ್ ಸಾಬ್ ಎಂಬುವವರು ನರೇಂದ್ರ ರಾಜು ಜೆ. ಅವರಿಂದ ಕೆ.ಎ. 51/ಎಂ.ಕೆ.6199 ನೋಂದಣಿ ಸಂಖ್ಯೆಯ ಕ್ರೇಟಾ ಕಾರನ್ನು ಖರೀದಿಸಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ದಿನಾಂಕ: 30-09-2024 ರಂದು ಬೆಳಿಗ್ಗೆ 9.30 ಗಂಟೆ ಸುಮಾರಿಗೆ ದೂರುದಾರರ ಕಾರಿಗೆ ಅತೀ ವೇಗವಾಗಿ ಬಂದ ಲಾರಿ ಚಾಲಕನು ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿ ಕಾರಿಗೆ ತೀವ್ರ ಹಾನಿಯಾಗಿತ್ತು.

ಲಾರಿ ಚಾಲಕನ ವಿರುದ್ಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂ:0042/2024 ರಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿತ್ತು. ಅಪಘಾತದಿಂದಾದ ಹಾನಿಯ ಬಗ್ಗೆ ದೂರುದಾರರು ಎದುರುದಾರರಾದ ಡಿವಿಜನಲ್ ಮ್ಯಾನೇಜರ್, ನ್ಯೂ ಇಂಡಿಯಾ ಅಶ್ಯೂರನ್ಸ್ ಕಂಪನಿ ಲಿ. ಹುಬ್ಬಳ್ಳಿ ಇವರಿಗೆ ಮಾಹಿತಿ ನೀಡಿದ್ದರು. ಎದುರುದಾರರು ದೂರು ನೋಂದಾಯಿಸಿಕೊಂಡು ತಮ್ಮ ಕಂಪನಿಯ ಸರ್ವೆಯರ್ ಅನ್ನು ನೇಮಕ ಮಾಡಿ, ವಾಹನವನ್ನು ಪರಿಶೀಲಿಸಿ ಮತ್ತು ಹಾನಿಗೊಳಗಾದ ವಾಹನವನ್ನು ದುರಸ್ತಿ ಮಾಡಲು ಶಿಫಾರಸ್ಸು ಮಾಡಿದ್ದರು.

ಎದುರುದಾರರ ಸರ್ವೇಯರ್ ಮಾಹಿತಿಯ ಮೇರೆಗೆ ದೂರುದಾರರ ವಾಹನವನ್ನು ಹೊಸಪೇಟೆಯ ಅಂಕಿತಾ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಬಿಟ್ಟು, ದುರಸ್ತಿ ನಂತರ ದಿನಾಂಕ: 9-12-2024 ರಂದು ರೂ.1,79,929/- ಗಳ ಬಿಲ್‍ನೊಂದಿಗೆ, ನಷ್ಟ ಪರಿಹಾರ ಕೋರಿ ಸೂಕ್ತ ದಾಖಲಾತಿಗಳೊಂದಿಗೆ ಎದುರುದಾರರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಎದುರುದಾರರು ವಾಹನದ ಮಾಲೀಕತ್ವವನ್ನು ದಿನಾಂಕ:26-06-2024 ರಂದು ದೂರುದಾರರಿಗೆ ವರ್ಗಾಯಿಸಿದ್ದು, ದೂರುದಾರರ ಆರ್‍ಸಿ ವರ್ಗಾವಣೆಯಾದ ದಿನಾಂಕದಿಂದ 14 ದಿನದೊಳಗೆ ವಿಮೆ ಪಾಲಸಿಯಲ್ಲಿ ಹೆಸರು ವರ್ಗಾವಣೆ ಮಾಡಲು ಅರ್ಜಿ ಸಲ್ಲಿಸಬೇಕಾಗಿತ್ತು.

ಆದರೆ ದೂರುದಾರರ ಹೆಸರಿಗೆ ವಿಮಾ ಪಾಲಿಸಿ ವರ್ಗಾಯಿಸಲು ವಿಮಾ ಕಂಪನಿಗೆ ತಿಳಿಸಿಲ್ಲ. ಆದ್ದರಿಂದ ದೂರುದಾರರ ಹೆಸರಿಗೆ ಪಾಲಿಸಿ ವರ್ಗಾವಣೆ ಮಾಡಲು ಅರ್ಜಿ ಸಲ್ಲಿಸದೇ ಇರುವ ಕಾರಣಕ್ಕಾಗಿ ಕ್ಲೇಮ್ ಮಾಡಲು ಸಾಧ್ಯವಿಲ್ಲವೆಂದು ಎದುರುದಾರರು ಅರ್ಜಿಯನ್ನು ನಿರಾಕರಿಸಿದ್ದರು. ಅದನ್ನು ಒಪ್ಪದ ದೂರುದಾರರು ತಮಗೆ ಉಂಟಾದ ನಷ್ಟಕ್ಕೆ ಪರಿಹಾರವನ್ನು ಕೋರಿ ಎದುರುದಾರ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಎದುರುದಾರರು ವಿಚಾರಣೆಗೆ ಹಾಜರಾಗಿ ದೂರಿನಲ್ಲಿನ ಆರೋಪಗಳನ್ನು ಅಲ್ಲಗಳೆಯುತ್ತಾ, ಅಪಘಾತದ ಸಮಯದಲ್ಲಿ ವಿಮೆ ಮಾಡಲಾದ ವಾಹನದ ಮಾಲೀಕರು ಮೊಹಮದ ಅಲಿ ಎಂದು ಮತ್ತು ಅದನ್ನು ದಿನಾಂಕ: 25-06-2024 ರಂದು ಆರ್‍ಸಿ ವರ್ಗಾಯಿಸಲಾಗಿದೆ. ಅಪಘಾತವು ದಿನಾಂಕ: 30-09-2024 ರಂದು ಸಂಭವಿಸಿದೆ ಮತ್ತು ಅಪಘಾತದ ಸಮಯದಲ್ಲಿ ವಿಮಾ ಪಾಲಸಿಯನ್ನು ದೂರುದಾರರ ಹೆಸರಿಗೆ ವರ್ಗಾಯಿಸಲಾಗಿಲ್ಲ.

ಆದ್ದರಿಂದ ವಿಮಾ ಪ್ರಮಾಣ ಪತ್ರದ ವರ್ಗಾವಣೆಗೆ ಸಂಬಂಧಿಸಿದಂತೆ ಪಾಲಸಿಯಲ್ಲಿ ಆರ್‍ಸಿಯನ್ನು ವಿಮಾದಾರರಿಗೆ ವರ್ಗಾಯಿಸಿದ ದಿನಾಂಕದಿಂದ 14 ದಿನಗಳಲ್ಲಿ ವಿಮೆಯ ವರ್ಗಾವಣೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ದೂರುದಾರರು ಆರ್‍ಸಿ ವರ್ಗಾವಣೆಯಾದ ತಕ್ಷಣವೇ ಪಾಲಸಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿರುವುದಿಲ್ಲ. ಇದು ಪಾಲಸಿಯ ನಿಯಮಗಳು ಮತ್ತು ಷರತ್ತುಗಳ ಉಲ್ಲಂಘನೆಯಾಗಿದೆ. ಆದ್ದರಿಂದ ದೂರುದಾರರ ಕ್ಲೇಮ್ ಅನ್ನು ನಿರಾಕರಿಸಿದ್ದರು.

ದೂರನ್ನು ದಾಖಲಿಸಿಕೊಂಡು ಎರಡು ಪಕ್ಷಗಾರರ ವಾದ, ಪ್ರತಿವಾದಗಳನ್ನು ಆಲಿಸಿದ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು ಎನ್.ಮೇತ್ರಿ ರವರು ಎದುರುದಾರರ ವಾಹನ ಅಪಘಾತವಾದ ಸಂದರ್ಭದಲ್ಲಿ ವಿಮಾ ಪಾಲಸಿಯು ಚಾಲ್ತಿಯಲ್ಲಿರುವ ಕಾರಣ ದೂರುದಾರರ ಕಾರಿನ ದುರಸ್ತಿವಮೊತ್ತ ರೂ.1,79,929/- ಗಳನನು ಎದುರುದಾರರಿಗೆ ನೀಡುವುದು ಅವಶ್ಯವಾಗಿರುತ್ತದೆ. ಆದ್ದರಿಂದ ಅಪಘಾತದಿಂದಾದ ನಷ್ಟ ಪರಿಹಾರವನ್ನು ನೀಡುವಲ್ಲಿ ಸೇವಾ ನ್ಯೂನ್ಯತೆ ಎಸಗಿರುವುದು ಸಾಬೀತಾಗಿರುವುದರಿಂದ ದೂರುದಾರರಿಗೆ ಎದುರುದಾರರ ನಷ್ಟ ಪರಿಹಾರವನ್ನು ವಾಹನ ಅಪಘಾತದ ದಿನಾಂಕದಿಂದ ಪಾವತಿಯಾಗುವವರೆಗೆ ವಾರ್ಷಿಕ ಶೇ.6 ರ ಬಡ್ಡಿ ಸಮೇತ ನೀಡುವಂತೆ ಹಾಗೂ ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗಾಗಿ ರೂ.10,000/- ಗಳನ್ನು ಮತ್ತು ದೂರಿನ ಖರ್ಚು ರೂ.5000/- ಗಳನ್ನು ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಎದುರುದಾರರು ದೂರುದಾರರಿಗೆ ಪಾವತಿಸುವಂತೆ ಆದೇಶ ನೀಡಿರುತ್ತಾರೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande